ADVERTISEMENT

ಯಾತ್ರೆಯಿಂದ ಭಾರತ ಜೋಡೊ, ಕಾಂಗ್ರೆಸ್‌ ಜೋಡೊ ಸಾಧ್ಯವಾಗಲಿದೆ: ಶಶಿ ತರೂರ್

ಪಿಟಿಐ
Published 6 ಸೆಪ್ಟೆಂಬರ್ 2022, 11:35 IST
Last Updated 6 ಸೆಪ್ಟೆಂಬರ್ 2022, 11:35 IST
ಶಶಿ ತರೂರ್
ಶಶಿ ತರೂರ್   

ತಿರುವನಂತಪುರ: ‘ಭಾರತವನ್ನು ಜೋಡಿಸುವ ಹಾಗೂ ಕಾಂಗ್ರೆಸನ್ನು ಒಂದಾಗಿಸುವ ಎರಡೂ ಉದ್ದೇಶಗಳು ‘ಭಾರತ್‌ ಜೋಡೊ’ ಯಾತ್ರೆ ಮೂಲಕ ಈಡೇರಲಿವೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಮಂಗಳವಾರ ಇಲ್ಲಿ ಹೇಳಿದ್ದಾರೆ.

‘ದೇಶದ ಉದ್ದಗಲಕ್ಕೂ ನಡೆಯುವ ಭಾರತ್ ಜೋಡೊ ಯಾತ್ರೆಯು ಪಕ್ಷದ ಮೌಲ್ಯಗಳು ಹಾಗೂ ಆದರ್ಶಗಳೊಂದಿಗೆ ಮುಖಂಡರನ್ನು ಒಂದುಗೂಡಿಸುವುದು’ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ತರೂರ್‌ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಲವು ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದರಿಂದ ಪಕ್ಷದ ಮತದಾರರಿಗೆ ಹೆಚ್ಚು ಆಯ್ಕೆ ಸಿಕ್ಕಂತಾಗಲಿದೆ’ ಎಂದರು.

ADVERTISEMENT

‘ಭಾರತವನ್ನು ಒಂದುಗೂಡಿಸುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್‌. ಒಂದು ವೇಳೆ, ದೇಶದ ಜನರು ಈ ಸಂದೇಶದಿಂದ ಪ್ರೇರಣೆ ಪಡೆದಿದ್ದೇ ಆದಲ್ಲಿ, ಪಕ್ಷದ ಪುನರುತ್ಥಾನಕ್ಕೆ ನಾಂದಿ ಹಾಡಿದಂತಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಭಾರತ್‌ ಜೋಡೊ ಬದಲು ಕಾಂಗ್ರೆಸ್‌ ಜೋಡೊ ಯಾತ್ರೆ ನಡೆಸಬೇಕು’ ಎಂಬ ಪಕ್ಷದ ಮಾಜಿ ಮುಖಂಡ ಗುಲಾಂ ನಬಿ ಆಜಾದ್‌ ಅವರ ಟೀಕೆಗೆ ಪ್ರತಿಕ್ರಿಯಿಸಿದ ತರೂರ್‌, ‘ಗುಲಾಂ ನಬಿ ಆಜಾದ್‌ ಅವರು ಒಬ್ಬ ಗೌರವಾನ್ವಿತ ನಾಯಕ. ಅವರ ನಿರ್ದಿಷ್ಟ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ’ ಎಂದರು.

‘ಭಾರತ್‌ ಜೋಡೊ ಯಾತ್ರೆ’ಗೆ ನಾಳೆಚಾಲನೆ
ಕನ್ಯಾಕುಮಾರಿ: ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಭಾರತ್‌ ಜೋಡೊ ಯಾತ್ರೆ’ಗೆ ಬುಧವಾರ (ಸೆ.7) ಇಲ್ಲಿ ಬೃಹತ್‌ ರ‍್ಯಾಲಿ ನಡೆಸುವ ಮೂಲಕ ಚಾಲನೆ ನೀಡಲಾಗುತ್ತಿದೆ.

3,570 ಕಿ.ಮೀ. ಸಂಚರಿಸಲಿರುವ ಈ ಯಾತ್ರೆ ಸಂದರ್ಭದಲ್ಲಿ, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ, ರಾಜಕೀಯ ಕೇಂದ್ರೀಕರಣ ಸೇರಿದಂತೆ ದೇಶವನ್ನು ಬಾಧಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಪಕ್ಷ ಹೇಳಿದೆ.

ಈ ಯಾತ್ರೆ ಆರಂಭವಾಗುವುದಕ್ಕೂ ಮುನ್ನ, ಶ್ರೀಪೆರಂಬೂದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಸ್ಮಾರಕದ ಬಳಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ನಂತರ ಕನ್ಯಾಕುಮಾರಿಯಲ್ಲಿ ಮಹಾತ್ಮ ಗಾಂಧಿ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಪಾಲ್ಗೊಳ್ಳುವರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಪಾಲ್ಗೊಳ್ಳುವರು.

ನಂತರ, ಎಲ್ಲ ಮುಖಂಡರು ಯಾತ್ರೆ ಆರಂಭವಾಗಲಿರುವ ಸ್ಥಳಕ್ಕೆ ತೆರಳುವರು ಎಂದು ಮೂಲಗಳು ಹೇಳಿವೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.