ADVERTISEMENT

‘ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕೋಟಿ ಕೋಟಿ ಕಪ್ಪ’: ಕಾಂಗ್ರೆಸ್ ವಾಗ್ದಾಳಿ

‘ದಿ ಕ್ಯಾರವಾನ್‌’ ವರದಿ: ಲೋಕಪಾಲ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 18:37 IST
Last Updated 22 ಮಾರ್ಚ್ 2019, 18:37 IST
   

ನವದೆಹಲಿ:ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ‘ಕರ್ನಾಟಕದ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಅವರು ಬಿಜೆಪಿ ಮುಖಂಡರಿಗೆ, ನ್ಯಾಯಮೂರ್ತಿಗಳಿಗೆ ಸಾವಿರಾರು ಕೋಟಿ ರೂಪಾಯಿ ನೀಡಿದ್ದಾರೆ’ ಎಂದು ‘ದಿ ಕ್ಯಾರವಾನ್’ ವೆಬ್‌ಸೈಟ್‌ ವರದಿ ಮಾಡಿದೆ. ಈ ಆರೋಪವನ್ನು ಲೋಕಪಾಲ ತನಿಖೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ಯಡಿಯೂರಪ್ಪ ಅವರ ಡೈರಿಯಲ್ಲಿ ಈ ಮಾಹಿತಿ ಇದೆ. ಡೈರಿ ಆದಾಯ ತೆರಿಗೆ ಇಲಾಖೆಯ ಸುಪರ್ದಿಯಲ್ಲಿ ಇದೆ’ ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ.ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ.

ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಕಾಂಗ್ರೆಸ್‌ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಲೋಕಪಾಲ ತನಿಖೆಗೆ ಆಗ್ರಹಿಸಿದ್ದಾರೆ.

ADVERTISEMENT

‘ಯಡಿಯೂರಪ್ಪ ಅವರ ಸಹಿ ಇರುವ ಈ ಡೈರಿ 2017ರಿಂದಲೂ ಆದಾಯ ತೆರಿಗೆ ಇಲಾಖೆಯ ಸುಪರ್ದಿಯಲ್ಲೇ ಇದೆ. ಹೀಗಿದ್ದೂ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ತನಿಖೆಗೆ ಏಕೆ ಒಳಪಡಿಸಿಲ್ಲ? ಪ್ರಧಾನಿಯಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರನ್ನೂ ತನಿಖೆಗೆ ಒಳಪಡಿಸಬೇಕಾದ ಪ್ರಕರಣ ಇದು. ನೂತನವಾಗಿ ರಚನೆ
ಯಾಗಿರುವ ಲೋಕಪಾಲವು ತನಿಖೆ ನಡೆಸಲು ತಕ್ಕುದಾದ ಪ್ರಕರಣ ಇದು’ ಎಂದು ಸುರ್ಜೇವಾಲಾ ಪ್ರತಿಪಾದಿಸಿದ್ದಾರೆ.

‘ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಲು ಮೋದಿ ಸರ್ಕಾರವು ನಿರಾಕರಿಸಿತ್ತೇ? ಬಿಜೆಪಿ ನಾಯಕರು ನಡೆಸಿದ ಭ್ರಷ್ಟಾಚಾರಕ್ಕೆ ಈ ಡೈರಿ ಸಾಕ್ಷ್ಯವಲ್ಲವೇ? ಈಗ ತನಿಖೆ ನಡೆಸಬೇಕೇ ಬೇಡವೇ ಎಂಬುದರ ಬಗ್ಗೆ ಪ್ರಧಾನಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಡೈರಿಯಲ್ಲಿ ಹೆಸರಿಸಿರುವ ನಾಯಕರೆಲ್ಲರೂ ಸ್ವತಃ ಮುಂದೆ ಬಂದು ತಾವು ತಪ್ಪಿತಸ್ಥರಲ್ಲ ಎಂದು ಹೇಳಬೇಕು. ಯಾವುದೇ ಸ್ವರೂಪದ ತನಿಖೆಗೆ ಸಿದ್ಧ ಎಂದು ಹೇಳಬೇಕು’ ಎಂದು ಅವರು ಸವಾಲು ಹಾಕಿದ್ದಾರೆ.

‘ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ’

‘ನನ್ನ ಹೆಂಡತಿ ಮೈತ್ರಾದೇವಿ ನಿಧನದ ನಂತರ ಒಂಟಿತನ ತೀವ್ರವಾಗಿ ಬಾಧಿಸುತ್ತಿತ್ತು. ಅದಕ್ಕಾಗಿಯೇ ಶೋಭಾ ಕರಂದ್ಲಾಜೆಯನ್ನು ಕೇರಳದ ಚೋಟಾನಿಕ್ಕರದಲ್ಲಿರುವ ಭಗವತಿ ದೇಗುಲದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದೆ. ಯಡಿಯೂರು ಸಿದ್ದಲಿಂಗನ ಹೆಸರಿನಲ್ಲಿ ಆಕೆಯನ್ನು ನನ್ನ ಕಾಯಾ, ವಾಚಾ, ಮನಸಾ ಪತ್ನಿ ಎಂದು ಒಪ್ಪಿಕೊಂಡೆ’.

-ಯಡಿಯೂರಪ್ಪ ಅವರು ಬರೆದಿದ್ದಾರೆ ಎನ್ನಲಾದ ಡೈರಿಯಲ್ಲಿ ಈ ಮಾಹಿತಿಯೂ ಇದೆ ಎಂದು‘ದಿ ಕ್ಯಾರವಾನ್’ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ, ‘ಯಾರೋ ಹುಚ್ಚರು ಆ ಡೈರಿ ಬರೆದಿರಬೇಕು ಎಂದು ಶೋಭಾ ಫೋನ್ ಕುಕ್ಕಿದರು. ಮತ್ತೆಮತ್ತೆ ಫೋನ್ ಮಾಡಿದರೂ ಶೋಭಾ ನಮ್ಮ ಕರೆ ಸ್ವೀಕರಿಸಲಿಲ್ಲ’ ಎಂದು ಕ್ಯಾರವಾನ್ ವರದಿಗಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘2016ರಲ್ಲಿ ಯಡಿಯೂರಪ್ಪ–ಶೋಭಾ ಮದುವೆಯಾಗಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಯಡಿಯೂರಪ್ಪ ಅಥವಾ ಶೋಭಾ ಈ ವರದಿಗಳನ್ನು ನಿರಾಕರಿಸಿರಲಿಲ್ಲ. ಆದರೆ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು’ ಎಂದು ಕ್ಯಾರವಾನ್ ವರದಿ ಹೇಳಿದೆ.

ಸಿ.ಡಿ, ಡೈರಿ ನಕಲಿ: ಶೋಭಾ

ಉಡುಪಿ: ಚುನಾವಣೆಯನ್ನು ನೇರವಾಗಿ ಎದುರಿಸಲಾಗದ ಪುಕ್ಕಲು ರಾಜಕಾರಣಿಗಳು ಸಿ.ಡಿ, ಡೈರಿ ಬಿಡುಗಡೆಯ ಮೂಲಕ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಕಾಂಗ್ರೆಸ್‌ಗೆ ಸಿ.ಡಿ, ಡೈರಿಗಳು ನೆನಪಾಗುತ್ತವೆ.ಅಭಿವೃದ್ಧಿಯಲ್ಲಿ ಗೆಲ್ಲಲಾಗದೆ ಮೈತ್ರಿ ಪಕ್ಷಗಳು ಸಿ.ಡಿ ರಾಜಕಾರಣ ಮಾಡುತ್ತಿವೆ.ರಾಜ್ಯದ ಜನರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಪಿಸಿದರು.

ಡೈರಿಯ ಚಿತ್ರದಲ್ಲಿರುವುದು

ಬಿ.ಎಸ್‌. ಯಡಿಯೂರಪ್ಪ ಆದ ನಾನು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ನಾನು ನಾಯಕರಿಗೆ ನೀಡಿದ ಹಣ

* ಲಾಲ್ ಕೃಷ್ಣ ಅಡ್ವಾಣಿ– ₹ 50 ಕೋಟಿ

* ರಾಜನಾಥ್ ಸಿಂಗ್– ₹ 100 ಕೋಟಿ

* ನಿತಿನ್ ಗಡ್ಕರಿ– ₹ 150 ಕೋಟಿ

* ಮುರಳಿ ಮನೋಹರ್ ಜೋಷಿ– ₹ 50 ಕೋಟಿ

* ನ್ಯಾಯಮೂರ್ತಿಗಳಿಗೆ– ₹ 250 ಕೋಟಿ

* ನ್ಯಾಯವಾದಿಗಳಿಗೆ– ₹ 50 ಕೋಟಿ (ವಕೀಲಿಕೆಗೆ ನೀಡಿದ ಶುಲ್ಕ)

* ಅರುಣ್ ಜೇಟ್ಲಿ– ₹ 150 ಕೋಟಿ

* ನಿತಿನ್ ಗಡ್ಕರಿ ಮಗನ ಮದುವೆಗೆ ₹ 10 ಕೋಟಿ ಹಣ ನೀಡಿದ್ದೇನೆ

* ಭಾ.ಜ.ಪ ಕೇಂದ್ರ ಸಮಿತಿಗೆ ₹ 1,000 ಕೋಟಿ ನೀಡಿರುವೆ

* ಬಿ.ಎಸ್‌. ಯಡಿಯೂರಪ್ಪ (ಸಹಿ)

***

‘ಇದು ಅವರ ಡೈರಿಯಲ್ಲ’

*‘ನನಗೆ ಡೈರಿ ಬರೆಯುವ ಅಭ್ಯಾಸವಿಲ್ಲ. ಈ ಬರವಣಿಗೆ ನನ್ನದಲ್ಲ’ ಎಂದು ಯಡಿಯೂರಪ್ಪ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದರು. ತಮ್ಮ ಬರವಣಿಗೆಯ ಮಾದರಿಯನ್ನೂ ನೀಡಿದ್ದರು. ಇದು ಅವರ ಡೈರಿಯಲ್ಲ

ಕೇಂದ್ರೀಯ ನೇರ ತೆರಿಗೆ ಮಂಡಳಿ

***

*ಆತ್ಮೀಯ ಡೈರಿ. ನನ್ನ ಭ್ರಷ್ಟಾಚಾರವೆಲ್ಲಾ ಜಗಜ್ಜಾಹೀರಾಗಿದೆ. ಬಿಜೆಪಿಯ ಹಲವು ನಾಯಕರಿಗೆ ಲಂಚ ಕೊಡಲು ಯತ್ನಿಸಿದ್ದು ಈಗ ದೇಶಕ್ಕೆಲ್ಲಾ ಗೊತ್ತಾಗಿದೆ. ನನ್ನ ಚೌಕೀದಾರ ಎಲ್ಲಾ ಕಳ್ಳರನ್ನು ರಕ್ಷಿಸಿದಂತೆ ನನ್ನನ್ನೂ ರಕ್ಷಿಸುತ್ತಾನೆ ಎಂಬ ಭರವಸೆಯಷ್ಟೇ ಉಳಿದಿದೆ. –ನಿನ್ನ ನಂಬುಗೆಯ ಬಿಎಸ್‌ವೈ

–ಕಾಂಗ್ರೆಸ್ ಟ್ವೀಟ್

*‘ಈ ಬರವಣಿಗೆ ನನ್ನದಲ್ಲ’ ಎಂದು ಯಡಿಯೂರಪ್ಪ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದರು. ತಮ್ಮ ಬರವಣಿಗೆಯ ಮಾದರಿಯನ್ನೂ ನೀಡಿದ್ದರು. ಇದು ಅವರ ಡೈರಿಯಲ್ಲ

ಕೇಂದ್ರೀಯ ನೇರ ತೆರಿಗೆ ಮಂಡಳಿ

*ನೋಮೊ(ನರೇಂದ್ರ ಮೋದಿ) ಅರುಣ್ ಜೇಟ್ಲಿ ರಾಜನಾಥ್ ಸಿಂಗ್... ಬಿಜೆಪಿಯ ಚೌಕೀದಾರರೆಲ್ಲರೂ ಕಳ್ಳರೇ

ರಾಹುಲ್ ಗಾಂಧಿ,ಕಾಂಗ್ರೆಸ್ ಅಧ್ಯಕ್ಷ

* ಎಲ್ಲಾ ಸುಳ್ಳು ಸಮಸ್ಯೆಗಳು ವಿಫಲವಾದ ಕಾರಣ ಕಾಂಗ್ರೆಸ್ ಈಗ ನಕಲಿಯ ಮೊರೆ ಹೋಗಿದೆ. ಕಾಂಗ್ರೆಸ್‌ ನೀಡಿರುವ ಬಿಡಿ ಕಾಗದಗಳು, ರಾಹುಲ್ ಗಾಂಧಿಯ ನಾಯಕತ್ವದಷ್ಟು ಮಾತ್ರ ವಿಶ್ವಾಸಾರ್ಹ

ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.