
ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಅವರ ಹೆಸರನ್ನು ಉಲ್ಲೇಖಿಸಿದೆ, ಅವರನ್ನು ‘ಎರಡು ನಮೂನೆಗಳು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ವ್ಯಂಗ್ಯವಾಡಿದರು.
ದೇಶದಲ್ಲಿ ಗಂಭೀರ ವಿಷಯಗಳು ಬಂದಾಗೆಲ್ಲ ಈ ಇಬ್ಬರೂ ದೇಶ ಬಿಟ್ಟು ಓಡಿ ಹೋಗುತ್ತಾರೆ ಎಂದು ಅವರು ಟೀಕಿಸಿದರು.
ಕೊಡೈನ್ ಕೆಮ್ಮಿನ ಸಿರಪ್ ಅಕ್ರಮ ವ್ಯಾಪಾರದ ಕುರಿತು ಎಸ್‌ಪಿ ಮಾಡಿದ ಆರೋಪಗಳಿಗೆ ಚಳಿಗಾಲದ ಅಧಿವೇಶನದಲ್ಲಿ ಉತ್ತರಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದರು.
‘ಸಿರಪ್ ಪ್ರಕರಣದ ವ್ಯವಹಾರದ ಕುರಿತು ಆಳವಾಗಿ ಅಧ್ಯಯನ ನಡೆಸಿದರೆ, ಸಮಾಜವಾದಿ ಪಕ್ಷದ ಜತೆಗಿನ ಸಂಬಂಧಗಳು ಹೊರಬರುತ್ತವೆ’ ಎಂದು ಎಚ್ಚರಿಸಿದ ಅವರು, ‘ಎಸ್‌ಪಿಯ ಲೋಹಿಯಾ ವಾಹಿನಿಯ ಪದಾಧಿಕಾರಿ ಖಾತೆಯ ಮೂಲಕವೂ ವ್ಯವಹಾರ ನಡೆದಿದೆ. ಎಸ್‌ಟಿಎಫ್ ಈ ಬಗ್ಗೆ ತನಿಖೆ ನಡೆಸುತ್ತಿದೆ’ ಎಂದು ಅವರು ಸದನಕ್ಕೆ ತಿಳಿಸಿದರು.
ಸಿರಪ್‌ಗೆ ಸಂಬಂಧಿಸಿದಂತೆ ಸಹಸ್ರಾರು ಕೋಟಿ ರೂಪಾಯಿಯ ಅಕ್ರಮ ವ್ಯಾಪಾರ ನಡೆದಿದ್ದು, ಇದರಿಂದಾಗಿ ನೂರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಎಸ್‌ಪಿ ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿದೆ.
ಅಖಿಲೇಶ್ ಪ್ರತಿಕ್ರಿಯೆ:
ಬ್ರಿಟನ್ ಪ್ರವಾಸದಲ್ಲಿರುವ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಮುಖ್ಯಮಂತ್ರಿ ಹೇಳಿಕೆಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಸಿ.ಎಂ ಹೇಳಿಕೆಯು ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದೆ. ದೆಹಲಿ ಮತ್ತು ಲಖನೌ ನಡುವಿನ ಅಂತರ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ತಮ್ಮ ನಡುವಿನ ಆಂತರಿಕ ಜಗಳವನ್ನು ಹೀಗೆಲ್ಲ ಬಹಿರಂಗಪಡಿಸಬಾರದು. ಕನಿಷ್ಠ ಔಚಿತ್ಯ ಕಾಪಾಡಿಕೊಳ್ಳಬೇಕು. ಸಭ್ಯತೆ ಮೀರಬಾರದು’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.