ADVERTISEMENT

ಇನ್ನೆರಡು ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಇರಲ್ಲ: ಸಿನ್ಹಾ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 5:42 IST
Last Updated 18 ನವೆಂಬರ್ 2021, 5:42 IST
ಮನೋಜ್‌ ಸಿನ್ಹಾ
ಮನೋಜ್‌ ಸಿನ್ಹಾ   

ಜಮ್ಮು: ಕಣಿವೆಯಲ್ಲಿ ಇನ್ನು ಎರಡು ವರ್ಷಗಳಲ್ಲಿ ಭಯೋತ್ಪಾದನೆ ಅಂತ್ಯಗೊಳಿಸುವ ಸಲುವಾಗಿ ಸಾಧ್ಯವಿರುವ ಎಲ್ಲ ರೀತಿಯಿಂದಲೂ ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ಉತ್ತರ ಭಾರತ ಭಾಗದ ಎಂಜಿನಿಯರಿಂಗ್‌ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್‌ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿನ್ಹಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸಾಕಷ್ಟು ಬದಲಾಗಿದೆ ಎಂದು ಹೇಳಿದ್ದಾರೆ.

'ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಾಕಷ್ಟು ಜನರು ಕಳವಳಗೊಂಡಿದ್ದಾರೆ. ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂದು ಹೇಳಲು ಬಯಸುತ್ತೇನೆ. ಕೆಲವು ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ಇನ್ನು ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕಾಣಸಿಗುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ. ಸರ್ಕಾರವು ಆ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾಗಿದೆ' ಎಂದಿದ್ದಾರೆ.

ADVERTISEMENT

ಕಣಿವೆಯಲ್ಲಿ 38 ಪಾಕಿಸ್ತಾನಿ ಭಯೋತ್ಪಾದಕರು ಸಕ್ರಿಯವಾಗಿದ್ದಾರೆ.ಅವರನ್ನು ಮಟ್ಟಹಾಕಲು ಶೀಘ್ರದಲ್ಲೇ ಸಂಘಟಿತ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಗುಪ್ತಚರ ಇಲಾಖೆ ಮೂಲಗಳು ಇತ್ತೀಚೆಗೆ ತಿಳಿಸಿದ್ದವು.38 ಉಗ್ರರ ಪೈಕಿ 27 ಮಂದಿ ಲಷ್ಕರ್-ಎ-ತೈಬಾಗೆ (ಎಲ್‌ಇಟಿ) ಸೇರಿದವರಾಗಿದ್ದರೆ, 11 ಮಂದಿ ಜೈಶ್-ಎ ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದವರು ಎನ್ನಲಾಗಿದೆ.

ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ),ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆರಾಶಿದ್ ಮುಜಾಫ್ಫರ್ ಗನೈ ಮತ್ತು ನಾಸಿರ್ ಮಿರ್ ಎಂಬ ಇಬ್ಬರನ್ನು ಬಂಧಿಸಿತ್ತು.

ಇದೇವೇಳೆ ಸಿನ್ಹಾ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.