
ಜುಬೀನ್ ಗರ್ಗ್
-ಪಿಟಿಐ ಚಿತ್ರ
ಗುವಾಹಟಿ: ಅಸ್ಸಾಂ ರಾಜ್ಯದ ಜನಪ್ರಿಯ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ‘ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್’ ಸಂಘಟಕ ಶ್ಯಾಮಕಾನು ಮಹಂತ ಹಾಗೂ ಗರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಶನಿವಾರ ಹೇಳಿದ್ದಾರೆ.
‘ಈ ಇಬ್ಬರೂ ಅ. 6ರಂದು ಗುವಾಹಟಿಗೆ ಬಂದು ತಮ್ಮ ಹೇಳಿಕೆಗಳನ್ನು ನೀಡಬೇಕು. ಇಲ್ಲದಿದ್ದರೆ, ಪೊಲೀಸರು ಅವರಿಗಾಗಿ ಶೋಧ ನಡೆಸಲಿದ್ದಾರೆ’ ಎಂದು ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದಾರೆ.
‘ದುರ್ಗಾ ಪೂಜೆ ಉತ್ಸವ ಆರಂಭವಾಗಿದೆ. ಅವರು ಇದೀಗ ಬರುವುದನ್ನು ನಾವು ಬಯಸುವುದಿಲ್ಲ. ಆದರೆ, ದಶಮಿ ನಂತರ, ಅವರು ಬರಬೇಕು’ ಎಂದಿದ್ದಾರೆ.
‘ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್’ಗಾಗಿ ಸಿಂಗಪುರಕ್ಕೆ ತೆರಳಿದ್ದ ಜುಬೀನ್, ಸೆ.19ರಂದು ಅಲ್ಲಿ ಸ್ಕೂಬಾಡೈವಿಂಗ್ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದರು.
‘ಗರ್ಗ್ ಸಾವಿನ ತನಿಖೆ ನಡೆಸುತ್ತಿರುವ ಸಿಐಡಿ ಮುಂದೆ ಹಾಜರಾಗಲು ಬಯಸದಿದ್ದರೆ, ಅವರು ನ್ಯಾಯಾಲಯವನ್ನು ಸಂಪರ್ಕಿಸಬಹುದು’ ಎಂದು ಹಿಮಂತ ಹೇಳಿದರು.
‘ಮಹಂತ ಅವರ ಬ್ಯಾಂಕ್ ಖಾತೆಗಳು ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಅವರು ಹೆಚ್ಚು ಕಾಲ ಹೊರಗೆ ಉಳಿಯಲು ಸಾಧ್ಯವಿಲ್ಲ’ ಎಂದರು.
‘ಸಿಂಗಪುರದಿಂದ ಗರ್ಗ್ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆಯುವ ಪ್ರಕ್ರಿಯೆ ನಡೆದಿದೆ. ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಿದ ಎರಡನೇ ಮರಣೋತ್ತರ ಪರೀಕ್ಷೆಯ ವರದಿಯೂ ಸಿದ್ಧಗೊಂಡಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಪೊಲೀಸ್ ತನಿಖೆಯಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿಗೆ ಶುಕ್ರವಾರ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳಿದರು.
‘ನೆರೆಯ ನೇಪಾಳದಲ್ಲಿ ನಡೆದಂತೆ ಜುಬೀನ್ ಹೆಸರಿನಲ್ಲಿ ಸರ್ಕಾರ ವಿರೋಧಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಡಿ. ಸಂಯಮ ಕಾಪಾಡಿಕೊಳ್ಳಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.