ADVERTISEMENT

ಸಿದ್ದರಾಮಯ್ಯಗೆ ಈಗ ಮುತ್ಸದ್ದಿತನ ಬಂದಿದೆ: ಜಿ.ಟಿ. ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 9:09 IST
Last Updated 19 ನವೆಂಬರ್ 2018, 9:09 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಚಿಕ್ಕಬಳ್ಳಾಪುರ: ‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಗೆ ಬಂದು ನನ್ನ ಎದುರು ಸ್ಪರ್ಧಿಸಬೇಕಾಗಿರಲಿಲ್ಲ. ಅವರಿಗೆ ಈಗ ಅನುಭವವಾಗಿದೆ ಎಂದು ನಾನು ಅಂದುಕೊಂಡಿರುವೆ. ಮುಖ್ಯಮಂತ್ರಿಯಾದ ಮೇಲೆ ಯಾರಿಗೆ ಆದರೂ ಮುತ್ಸದಿತನ ಬರಬೇಕು. ಅವರಿಗೆ ಈಗ ಮುತ್ಸದಿತನ ಬಂದಿದೆ. ಹೊಂದಾಣಿಕೆಯಿಂದ ಹೋಗುತ್ತೇವೆ ಎನ್ನುವ ನಂಬಿಕೆ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಆರಂಭಗೊಂಡ ‘ಜಾಗತಿಕ ಯುವ ಸಮ್ಮೇಳನ’ದ ಉದ್ಘಾಟನೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.

‘1978ರಲ್ಲಿ ಸಿದ್ದರಾಮಯ್ಯನವರಿಗೂ ನಮಗೂ ಬದ್ಧ ದ್ವೇಷ. 1983ರಲ್ಲಿ ಒಟ್ಟಾದೆವು. ಅಲ್ಲಿಂದ 25 ವರ್ಷಗಳ ಕಾಲ ನಾನು ಅವರು ಒಂದೇ ಎನ್ನುವ ರೀತಿ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದೇ ನಾನು. ಅವರು ಮುಖ್ಯಮಂತ್ರಿಯಾಗಬೇಕು. ಪೇಟಾ ಹಾಕಬೇಕು ಎಂದು ಆಸೆ ಪಟ್ಟಿದ್ದೆ. ಆ ನಮ್ಮ ಆಸೆ ಈಡೇರಿದಾಗ ಸಂತಸ ಪಟ್ಟಿದ್ದೆ’ ಎಂದು ತಿಳಿಸಿದರು.

‘ಆದರೆ ಸಿದ್ದರಾಮಯ್ಯನವರು ಚಾಮುಂಡೇಶ್ವರಿಗೆ ಬಂದು ನನ್ನ ಎದುರು ಸ್ಪರ್ಧಿಸಿದಾಗ ತುಂಬಾ ನೋವು ಮಾಡಿಕೊಂಡೆ. ಇಷ್ಟು ವರ್ಷ ಜತೆಯಲ್ಲಿದ್ದೆವು. ಅವರು ಇಲ್ಲಿ ಬಂದು ಸ್ಪರ್ಧಿಸಬೇಕಾಗಿರಲಿಲ್ಲ ಎಂದುಕೊಂಡೆ. ಆದರೂ ಅವರ ಬಗ್ಗೆ ಒಂದೇ ಒಂದು ದಿನ ಏಕವಚನದಲ್ಲಿ ಮಾತನಾಡಲಿಲ್ಲ’ ಎಂದರು.

‘ಈಗ ಆಗಿರುವುದೆಲ್ಲವೂ ದೇವರು ಕೊಟ್ಟ ತೀರ್ಪು. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಸಚಿವನಾಗುವಾಗ ಪ್ರಮಾಣ ಮಾಡಿದ್ದನ್ನು ಉಳಿಸಿಕೊಂಡು ಹೋಗುವುದು ನನ್ನ ಧರ್ಮ. ಸಮ್ಮಿಶ್ರ ಸರ್ಕಾರದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ನಾನು ನಡೆದುಕೊಂಡು ಹೋಗುತ್ತೇನೆ. ಯಾರಿಗೂ ವಂಚನೆ, ಮೋಸ ಮಾಡುವುದಿಲ್ಲ’ ಎಂದು ಹೇಳಿದರು.

ADVERTISEMENT

ಸಿಎಂ ಹುದ್ದೆ ಕೊಟ್ಟರೂ ಬೇಡ
‘ಪರಮೇಶ್ವರ್ ಅವರು ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ದಲಿತ ಸಮುದಾಯ ರಾಜ್ಯ, ದೇಶದಲ್ಲಿ ದೊಡ್ಡದಾಗಿದೆ. ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿಲ್ಲ. ಪರಮೇಶ್ವರೋ, ಖರ್ಗೆಯವರೋ ದಲಿತರೊಬ್ಬರೂ ಒಂದು ಬಾರಿ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಮೊದಲಿನಿಂದಲೂ ಕೇಳಿಬರುತ್ತಿದೆ. ಅವರು ಹೇಳುವುದರಲ್ಲಿ ತಪ್ಪು ಏನಿದೆ’ ಎಂದು ಪ್ರಶ್ನಿಸಿದರು.

‘ನಾನು ರಾಜಕೀಯ, ಶಾಸಕ ಸ್ಥಾನಕ್ಕೆ ಎಂದೂ ಆಸೆ ಪಟ್ಟವನಲ್ಲ. 1983ರಲ್ಲಿ ಸಿದ್ದರಾಮಯ್ಯನವರಿಗೆ ದುಡಿದಾಗ ಎಲ್ಲರೂ ಕಾಂಗ್ರೆಸ್‌ಗೆ ಹೊರಟು ಹೋದರು. ಒಬ್ಬರೂ ಇರಲಿಲ್ಲ. ಅನಿವಾರ್ಯವಾಗಿ ಚುನಾವಣೆಗೆ ಸ್ಪರ್ಧಿಸಿದೆ. ಸದ್ಯ ಕೊಟ್ಟ ಖಾತೆಯಲ್ಲಿ ತೃಪ್ತಿಯಾಗುವ ರೀತಿ ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕು. ಮುಖ್ಯಮಂತ್ರಿ ಹುದ್ದೆ ಕೊಟ್ಟರೂ ನಿರಾಕರಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದುರಸ್ತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಆಸೆಯಿಂದ ಈ ಹಿಂದೆ ಕಂದಾಯ ಸಚಿವ ಸ್ಥಾನಕ್ಕೆ ಹಠ ಹಿಡಿದಿದ್ದೆ. ಇವತ್ತು ದೇಶಪಾಂಡೆಯವರು ಆ ಖಾತೆ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇವತ್ತು ನನ್ನ ಖಾತೆಯಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಹೀಗಾಗಿ ಖಾತೆಯಲ್ಲಿ ಬದಲಾವಣೆ ಆಗುವ ಪ್ರಶ್ನೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.