ADVERTISEMENT

10 ವರ್ಷದ ಬಾಲಕ ಸೇರಿ ಒಂದೇ ಗ್ರಾಮದಲ್ಲಿ 12 ಮಂದಿಗೆ ಕೊರೊನಾ ವೈರಸ್ ಸೋಂಕು

​ಪ್ರಜಾವಾಣಿ ವಾರ್ತೆ
Published 6 ಮೇ 2020, 8:32 IST
Last Updated 6 ಮೇ 2020, 8:32 IST
   

ಬಾಗಲಕೋಟೆ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಳ್ಳಿಯೊಂದರಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಬಾದಾಮಿ ತಾಲ್ಲೂಕಿನ ಢಾಣಕಶಿರೂರು ಗ್ರಾಮದಲ್ಲಿ 10 ವರ್ಷದ ಬಾಲಕ ಸೇರಿದಂತೆ 12 ಮಂದಿಗೆ ಬುಧವಾರ ಸೋಂಕು ದೃಢಪಟ್ಟಿದೆ.

ಬಾದಾಮಿ ಪಟ್ಟಣದ ಚಾಲುಕ್ಯ ನಗರದ ಚಿಕ್ಕಪ್ಪನ ಮನೆಗೆ ಮೂಡುಬಿದಿರೆಯಿಂದ ಮರಳಿದ್ದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಸೋಂಕು ತಗುಲಿದೆ. ಆಕೆ ಶೀತ-ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ADVERTISEMENT

ಢಾಣಕಶಿರೂರಿನ 21 ವರ್ಷದ ಗರ್ಭಿಣಿಗೆ (ರೋಗಿ ಸಂಖ್ಯೆ 607) ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್‌ಗೆ ತಪಾಸಣೆಗೆ ತೆರಳಿದ್ದಾಗ ಸೋಂಕು ಪತ್ತೆಯಾಗಿತ್ತು. ಈಗ ಆಕೆಯ ಸಂಪರ್ಕಕ್ಕೆ ಬಂದ ಅಕ್ಕಪಕ್ಕದ ಮನೆಯ 12 ಮಂದಿಗೆ ಸೋಂಕು ದೃಢಪಟ್ಟಿದೆ.

ವಿಶೇಷವೆಂದರೆ ಗರ್ಭಿಣಿಯ ಕುಟುಂಬದ 9 ಮಂದಿಗೆ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಗರ್ಭಿಣಿಗೆ ಸೀಮಂತ ಕಾರ್ಯ ನೆರವೇರಿಸಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಗಳು ಪಾಲ್ಗೊಂಡಿದ್ದರು. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗರ್ಭಿಣಿಗೆ ಸೋಂಕು ತಗುಲಿರುವ ಮೂಲ ಇನ್ನೂ ಗೊತ್ತಾಗಿಲ್ಲ. ಸೀಮಂತ ಕಾರ್ಯಕ್ಕೆ ಬಂದವರಿಂದಲೂ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಪತ್ತೆ ಮಾಡಿ ಅವರನ್ನು ತಪಾಸಣೆಗೊಳಪಡಿಸುವ ಜೊತೆಗೆ ಆ ಕುಟುಂಬದವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಲಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಇವರಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 17 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.