ADVERTISEMENT

ಜೂನ್ 10ರಂದು ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ

ರ‍್ಯಾಂಕ್‌ ವಿದ್ಯಾರ್ಥಿಗಳಿಗೆ 95 ಚಿನ್ನದ ಪದಕಗಳ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
<div class="paragraphs"><p>ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ</p></div>

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ

   

ಬಾಗಲಕೋಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಜೂನ್ 10 ರಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಹೇಳಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋವಿವಿಯ ಉದ್ಯಾನಗಿರಿ‌ ಆವರಣದ ಮುಖ್ಯ ಪ್ರೇಕ್ಷಾಗೃಹದಲ್ಲಿ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ವಹಿಸುವರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉಪಸ್ಥಿತಿರುವರು. ಹೈದರಾಬಾದ್‍ನ ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ ಮಹಾನಿರ್ದೇಶಕ ಹಿಮಾಂಶು ಪಾಠಕ್ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಘಟಿಕೋತ್ಸವದಲ್ಲಿ 508 ಬಿ.ಎಸ್‌ಸಿ ತೋಟಗಾರಿಕೆ ಮತ್ತು ಬಿಟೆಕ್ ವಿದ್ಯಾರ್ಥಿಗಳು, ಎಂಎಸ್‌ಸಿ  ಪದವಿ 10 ವಿಭಾಗಗಳ 144 ವಿದ್ಯಾರ್ಥಿಗಳು, ಪಿಎಚ್‍ಡಿ 9 ವಿಭಾಗಗಳ 42 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 25 ಹಾಗೂ ದಾನಿಗಳ ನೀಡಿರುವ 70 ಚಿನ್ನದ  ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದರು.

ದೇಶದಲ್ಲಿರುವ ಏಳು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಕಿರಿಯ ಸಂಶೋಧನಾ ಶಿಷ್ಯವೇತನ (ಜೆಆರ್‌ಎಫ್‌) ಪಡೆಯುವುದರಲ್ಲಿ ಮೊದಲ ಸ್ಥಾನ ಗಳಿಸಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ನಡೆಸುವ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 18 ವಿದ್ಯಾರ್ಥಿಗಳು ಜೆಆರ್‌ಎಫ್‌, ಐದು ವಿದ್ಯಾರ್ಥಿಗಳು ಎಸ್‌ಆರ್‌ಎಫ್‌, 42 ವಿದ್ಯಾರ್ಥಿಗಳು ಎನ್‌ಟಿಎಸ್‌–ಪಿಜಿ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕ ಸಾಲಿನಲ್ಲಿ ಬಿ.ಎಸ್‌ಸಿ ತೋಟಗಾರಿಕೆ ಪದವಿಯಲ್ಲಿ 2,302, ಬಿ.ಟೆಕ್ (ಆಹಾರ ತಂತ್ರಜ್ಞಾನ) ಪದವಿಯಲ್ಲಿ 123, ಎಂ.ಎಸ್‌ಸಿ ಪದವಿಯಲ್ಲಿ 266, ಪಿಎಚ್‍ಡಿಯಲ್ಲಿ 75 ಹಾಗೂ ಡಿಪ್ಲೊಮಾದಲ್ಲಿ 33 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದರಲ್ಲಿ ಶೇ53.63ರಷ್ಟು ವಿದ್ಯಾರ್ಥಿನಿಯರಿದ್ದಾರೆ. 315 ಶಿಕ್ಷಕ ಮತ್ತು 433 ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಒಂಬತ್ತು ಮಂದಿ ಶಿಕ್ಷಣ ಪ್ರೇಮಿಗಳು ತಲಾ ₹ 1 ಲಕ್ಷ ಠೇವಣಿ ಇಟ್ಟಿದ್ದು, ಅದರಿಂದ ಬಡುವ ಬಡ್ಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹500 ಶಿಷ್ಯವೇತನ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಸಕ್ತವಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆಯೇ ವಿದ್ಯಾರ್ಥಿಗಳಿಗೆ ಸಂಶೋಧನೆ ಕೈಗೊಳ್ಳಲು ಸೂಚಿಸಲಾಗಿದೆ. ಬಿಟಿಡಿಎ ಈ ವರ್ಷದಿಂದ ಗುತ್ತಿಗೆ ನೀಡಿದ್ದ ಎರಡು ಸೆಕ್ಟರ್‌ಗಳಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ತಿಳಿಸಿದೆ. ವಿಶ್ವವಿದ್ಯಾಲಯದ ಸಂಶೋಧನಾ ಚಟುವಟಿಕೆಗಳಿಗೆ 500 ಎಕರೆಗೂ ಹೆಚ್ಚು ಭೂಮಿ ಬೇಕಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತೋವಿವಿ ಕುಲಸಚಿವ ಮಹಾದೇವ ಮುರಗಿ, ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಬಿ. ಫಕ್ರುದ್ದೀನ್‌, ವಿಸ್ತರಣಾ ನಿರ್ದೇಶಕ ವೆಂಕಟೇಶಲು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.