ADVERTISEMENT

ಇನ್ನೂ ಆಸ್ತಿ ವಿವರ ಸಲ್ಲಿಸದ 163 ಶಾಸಕರು

ಸಲ್ಲಿಸದವರ ಪಟ್ಟಿಯಲ್ಲಿ ಮಾಧುಸ್ವಾಮಿ, ಆರಗ, ಸಿದ್ದರಾಮಯ್ಯ, ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:29 IST
Last Updated 6 ಜುಲೈ 2022, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹನ್ನೊಂದು ಸಚಿವರೂ ಸೇರಿದಂತೆ 163 ಶಾಸಕರು ಲೋಕಾಯುಕ್ತರಿಗೆ ಕಳೆದ ಆರ್ಥಿಕ ವರ್ಷದ ಆಸ್ತಿ ಮತ್ತು ಬಾಧ್ಯತೆಯ ವಿವರಗಳ ಪ್ರಮಾಣಪತ್ರವನ್ನು ಈವರೆಗೂ ಸಲ್ಲಿಸಿಲ್ಲ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಜೂನ್‌ 30ರೊಳಗೆ ತಮ್ಮ ಆಸ್ತಿ ಹಾಗೂ ಬಾಧ್ಯತೆಯ ವಿವರ ಸಲ್ಲಿಸುವುದು ಕಡ್ಡಾಯ. ವಿಧಾನಸಭೆಯ 127 ಸದಸ್ಯರು ಮತ್ತು ವಿಧಾನ ಪರಿಷತ್‌ನ 52 ಸದಸ್ಯರು ಜೂನ್‌ 30ರವರೆಗೂ ಈ ಕುರಿತ ಪ್ರಮಾಣಪತ್ರವನ್ನು ಲೋಕಾಯುಕ್ತರಿಗೆ ಸಲ್ಲಿಸಿರಲಿಲ್ಲ.

ಗಡುವು ಮುಗಿದ ಬಳಿಕ 16 ಮಂದಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ವಿಧಾನಸಭೆಯ 114 ಸದಸ್ಯರು ಮತ್ತು ವಿಧಾನ ಪರಿಷತ್‌ನ 49 ಸದಸ್ಯರು ಲೋಕಾಯುಕ್ತಕ್ಕೆ ಇನ್ನೂ ವಿವರ ಒದಗಿಸಿಲ್ಲ.

ADVERTISEMENT

‘ನೈಜ ಹೋರಾಟಗಾರರ ವೇದಿಕೆ’ಯ ಎಚ್‌.ಎಂ. ವೆಂಕಟೇಶ್‌ ಅವರಿಗೆ ಲೋಕಾಯುಕ್ತವು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದೆ. ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಎನ್‌. ರವಿಕುಮಾರ್‌ ಮತ್ತು ಶರಣಗೌಡ ಪಾಟೀಲ ಬಯ್ಯಾಪುರ ಗುಡುವು ಮುಗಿದ ಮರುದಿನ (ಜುಲೈ 1) ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸಚಿವ ಬಿ.ಸಿ. ನಾಗೇಶ್‌ ಸೇರಿದಂತೆ ವಿಧಾನಸಭೆಯ 13 ಸದಸ್ಯರು ಜುಲೈ 1ರಿಂದ 5ರೊಳಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಅದರಲ್ಲಿದೆ.

ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ಹಾಲಪ್ಪ ಆಚಾರ್‌, ಬಿ.ಸಿ. ಪಾಟೀಲ, ಬಿ. ಶ್ರೀರಾಮುಲು, ಮುನಿರತ್ನ, ಕೆ. ಗೋಪಾಲಯ್ಯ, ಎಸ್‌. ಅಂಗಾರ, ಕೆ.ಸಿ. ನಾರಾಯಣ ಗೌಡ, ಎಸ್‌.ಟಿ. ಸೋಮಶೇಖರ್‌, ಎಂ.ಟಿ.ಬಿ. ನಾಗರಾಜು ಈವರೆಗೂ ಆಸ್ತಿ ಮತ್ತು ಬಾಧ್ಯತೆಯ ವಿವರಗಳುಳ್ಳ ಪ್ರಮಾಣಪತ್ರ ಸಲ್ಲಿಸಿಲ್ಲ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೂಡ ಈವರೆಗೂ ಆಸ್ತಿ ವಿವರಗಳ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡಿಲ್ಲ.

‘ರಾಜ್ಯದಲ್ಲಿ ಲೋಕಾಯುಕ್ತ ಕಾಯ್ದೆಯನ್ನು ರೂಪಿಸಿ, ಜಾರಿಗೆ ತಂದ ಚುನಾಯಿತ ಪ್ರತಿನಿಧಿಗಳೇ ಅದನ್ನು ಉಲ್ಲಂಘಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಕಾನೂನು ಪಾಲಿಸುವಂತೆ ನಾಗರಿಕರಿಗೆ ಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ’ ಎಂದು ವೆಂಕಟೇಶ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.