ಬೆಂಗಳೂರು: 1971 ಭಾರತ– ಪಾಕಿಸ್ತಾನ ಯುದ್ಧದಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಕಾರಣದಿಂದ ಭಾರತವು ಗೆಲುವು ಸಾಧಿಸಿತೇ ಹೊರತು, ಇಂದಿರಾಗಾಂಧಿ ಕಾರಣಕ್ಕಾಗಿ ಅಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಹೇಳಿದರು.
ಮಾಣಿಕ್ ಷಾ ಅವರು ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆದ್ದರೆ, ಇಂದಿರಾ ಅವರು 1972 ರ ಶಿಮ್ಲಾ ಒಪ್ಪಂದದ ಮೂಲಕ ಪಾಕಿಸ್ತಾನದ ವಿರುದ್ಧ ಸೋತರು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
1971 ರಲ್ಲಿ ಜುಲೈನಲ್ಲೇ ಯುದ್ಧ ಮಾಡಬೇಕು ಎಂದು ಇಂದಿರಾಗಾಂಧಿ ಅವರು ಪಟ್ಟು ಹಿಡಿದಿದ್ದರು. ಆದರೆ, ಮಾಣಿಕ್ ಷಾ ಅವರು ಅದಕ್ಕೆ ಒಪ್ಪಲೇ ಇಲ್ಲ. ಮುಂಗಾರು ಸಂದರ್ಭದಲ್ಲಿ ಯುದ್ಧ ಮಾಡಿದರೆ ಸೋಲುವ ಅಪಾಯವಿದೆ ಎಂಬುದನ್ನು ಅವರ ಗಮನಕ್ಕೆ ತಂದದ್ದು ಮಾತ್ರವಲ್ಲದೇ, ಡಿಸೆಂಬರ್‌ನಲ್ಲೇ ಯುದ್ಧ ಮಾಡಬೇಕು ಎಂದು ಹೇಳಿದ್ದರು. ಇಂದಿರಾ ಒಪ್ಪದಿದ್ದಾಗ ಷಾ ರಾಜೀನಾಮೆ ಕೊಡಲು ಮುಂದಾಗಿದ್ದರು. ಅಂತಿಮವಾಗಿ ಮಾಣಿಕ್ ಷಾ ಅವರ ಮಾತೇ ನಡೆಯಿತು. ಯುದ್ಧದಲ್ಲಿ ಗೆಲುವು ಸಾಧಿಸಲಾಯಿತು ಎಂದು ಹೇಳಿದರು.
ಈ ಯುದ್ಧದಿಂದಾಗಿ ಭಾರತವು ಆರ್ಥಿಕವಾಗಿ ಕುಸಿತ ಕಂಡಿತು. ಅಷ್ಟೇ ಅಲ್ಲ, 5 ಕೋಟಿ ಬಾಂಗ್ಲಾ ದೇಶಿ ನಿರಾಶ್ರಿತರು ಭಾರತಕ್ಕೆ ಬಂದರು. ಅವರನ್ನು ವಾಪಸ್ ಕಳುಹಿಸಲು ಸಾಧ್ಯವಾಗಲಿಲ್ಲ. ಅಷ್ಟು ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗರು ಈಗಲೂ ಭಾರತಕ್ಕೆ ಸಮಸ್ಯೆಯಾಗಿಯೇ ಉಳಿದಿದ್ದಾರೆ. ಅಲ್ಲದೇ, ಬಾಂಗ್ಲಾದೇಶ ಈಗಲೂ ಮಗ್ಗಲು ಮುಳ್ಳಾಗಿ ಉಳಿದಿದೆ ಎಂದರು.
ಶಿಮ್ಲಾ ಒಪ್ಪಂದದ ಪ್ರಕಾರ ಭಾರತೀಯ ಸೇನೆ ಗೆದ್ದಿದ್ದ ಸುಮಾರು 13 ಸಾವಿರ ಕಿ.ಮೀಗೂ ಹೆಚ್ಚು ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕಾಯಿತು. ಪಾಕಿಸ್ತಾನಿ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಬೇಕಾಯಿತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.