ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 306 ರೈಲು ಕೋಚ್‌ಗಳ (ರೋಲಿಂಗ್ ಸ್ಟಾಕ್) ಖರೀದಿಗೆ ರಾಜ್ಯದ ಪಾಲು ₹2,135 ಕೋಟಿ ಒದಗಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಮುಂದಿನ 5 ವರ್ಷಗಳಲ್ಲಿ 306 ಕೋಚ್‌ಗಳನ್ನು ಖರೀದಿಸಲು ಈ ಮೊತ್ತವನ್ನು ಕೆಆರ್‌ಐಡಿಇಗೆ ಒದಗಿಸಲಾಗುವುದು. ಈ ಯೋಜನೆಯ ಅಂದಾಜು ಮೊತ್ತ ₹4,300 ಕೋಟಿ ಆಗಿದ್ದು, ರಾಜ್ಯವು ₹2,135 ಕೋಟಿ ಭರಿಸಲಿದೆ’ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಅಡಿ ಆಸ್ತಿ ತೆರಿಗೆಯನ್ನು ಘೋಷಿಸಿಕೊಂಡಿರುವ ಸ್ವತ್ತಿನ ಮಾಲೀಕರು ಮೇಲ್ಮುಖ ಸ್ವಯಂ ಪರಿಷ್ಕರಣೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲು ಬಿಬಿಎಂಪಿ (ಎರಡನೇ ತಿದ್ದುಪಡಿ) ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಒಪ್ಪಿಗೆ ನೀಡಲಾಗಿದೆ.
ಸ್ವಯಂ ಪರಿಷ್ಕರಣೆಗೆ ನಿಯಮಗಳಲ್ಲಿ ಅವಕಾಶ ಇರದ ಕಾರಣ, ಅನಗತ್ಯ ವಿಳಂಬ ತಪ್ಪಿಸಲು ಬಿಬಿಎಂಪಿ (ತಿದ್ದುಪಡಿ) ಸುಗ್ರೀವಾಜ್ಞೆ 2024 ಹೊರಡಿಸಲಾಗಿತ್ತು. ಸುಗ್ರೀವಾಜ್ಞೆಗೆ ಬದಲಿಗೆ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೆ ಸರ್ಕಾರದ ಪ್ರತಿನಿಧಿಯನ್ನು ನೇಮಿಸಲು ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2024 ಅನ್ನು ಅಧಿವೇಶನದಲ್ಲಿ ಮಂಡಿಸಲು ಒಪ್ಪಿಗೆ ನೀಡಲಾಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯ ವಂತಿಗೆ ಮೊತ್ತ ಹೆಚ್ಚಿಸುವ ಉದ್ದೇಶದಿಂದ ‘ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ’ಗೆ ತಿದ್ದುಪಡಿ ತರಲಾಗುವುದು. ಇದರಿಂದ ಕಾರ್ಮಿಕ ಕಲ್ಯಾಣ ನಿಧಿಗೆ ಕಾರ್ಮಿಕರಿಂದ ₹50, ಮಾಲೀಕರಿಂದ ಪ್ರತಿ ಕಾರ್ಮಿಕರಿಗೆ ₹100 ಮತ್ತು ಸರ್ಕಾರದಿಂದ ಪ್ರತಿ ಕಾರ್ಮಿಕರಿಗೆ ₹50ರಂತೆ ವಂತಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.