ಸಾಂದರ್ಭಿಕ ಚಿತ್ರ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಸಾಗಾಣಿಕೆ ವೆಚ್ಚ, ಸಗಟು ಮತ್ತು ಚಿಲ್ಲರೆ ಲಾಭಾಂಶದ ಅನುದಾನ ₹244.10 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಮತ್ತು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಮಂಗಳವಾರ ಮುಷ್ಕರವನ್ನು ವಾಪಸ್ ಪಡೆದಿದ್ದು, ಪಡಿತರ ಸಾಗಣೆ ಲಾರಿಗಳು ರಸ್ತೆಗಿಳಿದಿವೆ.
ಅನ್ನಭಾಗ್ಯ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್ಎಫ್‌ಎಸ್‌ಎ) ಯೋಜನೆಗಳ ಆಹಾರ ಧಾನ್ಯ ಸಾಗಣೆ ವೆಚ್ಚದ ಬಿಲ್ ಐದು ತಿಂಗಳಿನಿಂದ ಪಾವತಿ ಮಾಡದಿರುವುದನ್ನು ಖಂಡಿಸಿ ಲಾರಿ ಮಾಲೀಕರು ಸೋಮವಾರದಿಂದ ಮುಷ್ಕರ ಆರಂಭಿಸಿದ್ದರು. ಇದರ ಪರಿಣಾಮ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಫೆಬ್ರುವರಿಯಿಂದ ಜೂನ್‌ವರೆಗೆ ‘ಅನ್ನಭಾಗ್ಯ ಯೋಜನೆ’ ಹಾಗೂ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಎನ್‌ಎಫ್ಎಸ್‌ಎ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಸಾಗಣೆಗೆ ಮಾಡಿರುವ ವೆಚ್ಚವನ್ನು ಸರ್ಕಾರ ಪಾವತಿ ಮಾಡಿರಲಿಲ್ಲ. 4,500 ಲಾರಿಗಳು ಪ್ರತಿ ತಿಂಗಳಿಗೆ 4.5 ಲಕ್ಷ ಟನ್‌ನಂತೆ ಐದು ತಿಂಗಳು ಸುಮಾರು 25 ಲಕ್ಷ ಟನ್ ಆಹಾರ ಧಾನ್ಯ ಸಾಗಣೆ ಮಾಡಿದ್ದವು. ₹250 ಕೋಟಿ ಬಿಡುಗಡೆ ಮಾಡಬೇಕಿತ್ತು.
ಗುತ್ತಿಗೆದಾರರ ಸಂಘದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ, ಫೆಬ್ರುವರಿಯಿಂದ ಮೇ ತಿಂಗಳವರೆಗೂ ಹೆಚ್ಚುವರಿ 5ಕೆ.ಜಿ ಅಕ್ಕಿ ಖರೀದಿ ಹೊರತುಪಡಿಸಿ ಸಗಟು, ಚಿಲ್ಲರೆ, ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಅನುದಾನವನ್ನು ಅನ್ನಭಾಗ್ಯ ಯೋಜನೆ ಅಡಿ ಖಜಾನೆ–2 ತಂತ್ರಾಂಶದ ಮೂಲಕ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಬಿಡುಗಡೆ ಮಾಡಿದೆ.
‘ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ ₹244.10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆಯಾ ಜಿಲ್ಲಾಧಿಕಾರಿ ಮೂಲಕ ಹಣ ಬಿಡುಗಡೆ ಮಾಡಲಾಗುತ್ತಿದೆ. ಬಾಕಿ ಹಣವನ್ನು ಎರಡು ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಹಾಗಾಗಿ ಮುಷ್ಕರ ವಾಪಸ್ ಪಡೆದಿದ್ದು, ಲಾರಿಗಳು ಡಿಪೊಗೆ ತೆರಳಿ ಲೋಡಿಂಗ್ ಕಾರ್ಯ ಆರಂಭಿಸಿವೆ. ಮುಷ್ಕರ ನಡೆಸುವುದೇ ನಮ್ಮ ಕೆಲಸವಲ್ಲ’ ಎಂದು ಲಾರಿ ಮಾಲೀಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.