ADVERTISEMENT

ಜೆಎಸ್‌ಡಬ್ಲ್ಯು: 25 ದಿನದಲ್ಲಿ 296 ಸೋಂಕಿತರು, ಗಣಿ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಕೆ.ನರಸಿಂಹ ಮೂರ್ತಿ
Published 24 ಜೂನ್ 2020, 10:42 IST
Last Updated 24 ಜೂನ್ 2020, 10:42 IST
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)   

ಬಳ್ಳಾರಿ: ಇಡೀ ದೇಶವೇ ಕೊರೊನಾ ಲಾಕ್‌ಡೌನ್‌ ಆಚರಿಸುತ್ತಿದ್ದ ವೇಳೆ ವಿಶೇಷ ರಿಯಾಯಿತಿ ಪಡೆದು ಎಂದಿನಂತೆ ಕೆಲಸ ಮುಂದುವರಿಸಿದ ಇಲ್ಲಿನ ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್ ಸಂಸ್ಥೆಯಲ್ಲಿ ಕೇವಲ 25 ದಿನದಲ್ಲಿ 296 ಸೋಂಕಿತರು ಕಂಡು ಬಂದಿದ್ದಾರೆ.

ಈಗ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸುವಷ್ಟರ ಮಟ್ಟಿಗೆ ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ ಅವರು ಬುಧವಾರ ವಿಡಿಯೊಸಂವಾದ ನಡೆಸಿದರು.

ಇಲ್ಲಿನ ಕೊರೆಕ್ಸ್‌ ಘಟಕದ ನೌಕರರೊಬ್ಬರಿಗೆ ಜೂನ್‌ 1ರಂದು ಸೋಂಕು ದೃಢಪಟ್ಟಾಗ ಇಡೀ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಯಷ್ಟೇ ಇತ್ತು. ಅವರೊಂದಿಗೆ ಮೊದಲ ಹಂತದಲ್ಲಿ 32 ಮಂದಿ ಮತ್ತು ಎರಡನೇ ಹಂತದಲ್ಲಿ 69 ಮಂದಿ ಸಂಪರ್ಕ ಹೊಂದಿದ್ದರು. ಈ 111 ಮಂದಿಯ ಪೈಕಿ ಬಹುತೇಕರಿಗೆ ಸೋಂಕು ತಗುಲಿದ್ದು, ಸಂಸ್ಥೆಯ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ, ಜಿಲ್ಲೆಯ ಆರು ತಾಲ್ಲೂಕುಗಳಿಂದ ಬರುವ ಉದ್ಯೋಗಿಗಳಿಗೂ ಹಬ್ಬಿದೆ.

ADVERTISEMENT

ಈ ಸಂಸ್ಥೆಯಲ್ಲಿ ಎರಡನೇ ಸೋಂಕಿತರು ಜೂನ್‌ 3ರಂದು ಸೋಂಕು ಕಂಡು ಬಂದ ಬಳಿಕ ಅವರೊಂದಿಗೆ ಮೊದಲ ಹಂತದ ಸಂಪರ್ಕ ಹೊಂದಿದ್ದ ಎಲ್ಲ 24 ಮಂದಿಗೂ ಸೋಂಕು ತಗುಲಿತ್ತು. ಎರಡನೇ ಹಂತದ ಸಂಪರ್ಕ ಹೊಂದಿದ್ದ 44 ಮಂದಿಯ ಪೈಕಿ ನಾಲ್ವರಿಗೆ ಸೋಂಕು ತಗುಲಿತ್ತು. ಈಗ ಜೆಎಸ್‌ಡಬ್ಲ್ಯು ಸಂಸ್ಥೆಯ ವ್ಯಾಪ್ತಿಯಲ್ಲೇ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆಯು ಶತಕದ ಹೊಸ್ತಿಲಲ್ಲಿದೆ.

ನೋಟಿಸ್‌: ಕೋವಿಡ್‌ 19 ನಿಯಂತ್ರಣ ಸಂಬಂಧ ನೀಡಲಾದ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸದೇ ಇದ್ದುದಕ್ಕೆ ಜಿಲ್ಲಾಡಳಿತವು ಸಂಸ್ಥೆಗೆ ಕಾರಣ ಕೇಳಿ ನೋಟಿಸ್‌ ಅನ್ನುಜೂನ್‌ 19ರಂದು ನೀಡಿತ್ತು.

ಅದಕ್ಕೂ ಮುನ್ನ ಘಟಕವನ್ನು ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶವಾಗಿಸಿ, ಜೂನ್‌ 15ರಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಆದೇಶ ನೀಡಿದ್ದರು. ಅಂದಿನಿಂದ ಜೂನ್‌ 30ರವರೆಗೂ ಆದೇಶ ಜಾರಿಯಲ್ಲಿರಲಿದ್ದು, ಘಟಕದಿಂದ ಹೊರಗೆ ಯಾರೂ ಬಾರದಂತೆ, ಒಳಗೆ ಯಾರೂ ಹೋಗದಂತೆ ಮೂರು ಪಾಳಿಯಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.

ಅಸಮಾಧಾನ: ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸಂಸ್ಥೆಯ ಕಾರ್ಯವೈಖರಿ ಕುರಿತು, ಸಂಸ್ಥೆಗೆ ಕೆಲಸ ಮುಂದುವರಿಸಲು ಅನುಮತಿ ನೀಡಿದ ಸರ್ಕಾರದ ನಿಲುವಿನ ಕುರಿತು ಜಿಲ್ಲೆಯಲ್ಲಿ ಅಸಮಾಧಾನವೂ ಹೆಚ್ಚಾಗುತ್ತಿದ್ದು, ವಾಟ್ಸ್‌ಅಪ್‌ ಗುಂಪುಗಳಲ್ಲಿ ದಿನವೂ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.