ADVERTISEMENT

SC/ST: 625 ಪ್ರಸ್ತಾವಗಳಲ್ಲಿ 408ಕ್ಕೆ ಅನುಮೋದನೆ- ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:57 IST
Last Updated 22 ಜುಲೈ 2024, 15:57 IST
ಕೃಷ್ಣ ಬೈರೇಗೌಡ 
ಕೃಷ್ಣ ಬೈರೇಗೌಡ    

ಬೆಂಗಳೂರು: ‘ಸರ್ಕಾರದಿಂದ ಮಂಜೂರಾಗಿದ್ದ ಜಮೀನುಗಳನ್ನು ಪರಭಾರೆ ಮಾಡಲು ಅನುಮತಿ ಕೋರಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೂರು ವರ್ಷಗಳಿಂದ ಈವರೆಗೆ ಸಲ್ಲಿಸಿರುವ 625 ಪ್ರಸ್ತಾವಗಳಲ್ಲಿ 408ಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಎಸ್‌.ಎನ್‌. ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘217 ಪ್ರಸ್ತಾವಗಳನ್ನು ವಿವರಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಲಾಗಿದೆ. ವಿವಿಧ ಟ್ರಸ್ಟ್‌, ಶಾಲೆಗಳಿಗೆ ಹಾಗೂ ಇತರೆ ಉದ್ದೇಶಕ್ಕಾಗಿ ಜಮೀನು ಮಂಜೂರಾತಿ ಕೋರಿ ಸರ್ಕಾರಕ್ಕೆ 131 ಪ್ರಸ್ತಾವಗಳು ಬಂದಿವೆ. ಈ ಪೈಕಿ, 62 ಪ್ರಸ್ತಾವಗಳಿಗೆ ಮಂಜೂರಾತಿ‌ ನೀಡಲಾಗಿದೆ. 25 ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ. ವಿವರಣೆ ಕೋರಿ 44 ಪ್ರಸ್ತಾವಗಳನ್ನು ಜಿಲ್ಲಾಧಿಕಾರಿಗಳಿಗೆ ವಾಪಸು ಕಳುಹಿಸಲಾಗಿದೆ’ ಎಂದರು.

ಪರಭಾರೆಗೆ ಅನುಮತಿ ಕೋರಿ ಸಲ್ಲಿಕೆಯಾದ ಪ್ರಸ್ತಾವಗಳನ್ನು ವಾಪಸು ಮಾಡುತ್ತಿರುವುದಕ್ಕೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಲೆ ಗರಂ ಆದ ನಾರಾಯಣಸ್ವಾಮಿ, ಜಿಲ್ಲಾಧಿಕಾರಿಯಿಂದ ಶಿಫಾರಸು ಆದ ಪ್ರಸ್ತಾವಗಳನ್ನು ತಿರಸ್ಕರಿಸುವುದು ಏಕೆ? ಜಿಲ್ಲಾಧಿಕಾರಿ, ಪ್ರಾದೇಶಿಕ ವಲಯ ಅಧಿಕಾರಿಯಿಂದ ಶಿಫಾರಸು ಮಾಡಿರುತ್ತಾರೆ. ಅವರೂ ಐಎಎಸ್‌ ಅಧಿಕಾರಿಗಳಲ್ಲವೇ? ಪ್ರಸ್ತಾವಗಳು ಅರ್ಹವಾಗಿ ಇಲ್ಲದೇ ಇದ್ದರೆ ಕೆಳಹಂತದಲ್ಲೇ ವಜಾ ಮಾಡಲಿ. ಸಚಿವರನ್ನು ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದರು.

ADVERTISEMENT

‘ಪರಭಾರೆಗೆ ಅನುಮತಿ ಪಡೆಯಲು, ಮೂಲ ಮಂಜೂರುದಾರರ ಪರ ಇನ್ಯಾರೊ ಅನುಮತಿ ಕೋರುತ್ತಾರೆ. ನಿಯಮಬದ್ಧವಾಗಿ ಪರಭಾರೆ ಆಗಬೇಕೆಂಬುದಷ್ಟೇ ಉದ್ದೇಶ. ಕೆಲವು ಕಡತಗಳಲ್ಲಿ ಮೂಲ ಮಂಜೂರಾತಿ ದಾಖಲಾತಿ ಇರುವುದಿಲ್ಲ. ಕೆಲವು ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಕೋರ್ಟ್ ಪ್ರಕರಣಗಳು ಬಾಕಿ ಇರುತ್ತವೆ. ವಂಶವೃಕ್ಷ ಇಲ್ಲದ ಪ್ರಸ್ತಾವಗಳೂ ಬರುತ್ತವೆ. ಈ ರೀತಿಯ ಕಡತಗಳನ್ನು ಹಿಂದಿರುಗಿಸಲಾಗುತ್ತದೆ’ ಎಂದು ಸಚಿವರು ಸ್ಪಷ್ಟನೆ ನೀಡಿದರು.

‘ಸ್ಮಶಾನಕ್ಕೂ ಜಾಗ ಇಲ್ಲದೆ ಖರೀದಿ ಸ್ಥಿತಿ’

‘ಸರ್ಕಾರದ ಜಾಗಗಳನ್ನೆಲ್ಲ ಮಂಜೂರು ಮಾಡಿದ ಪರಿಣಾಮ, ಸ್ಮಶಾನಕ್ಕೂ ಜಾಗ ಇಲ್ಲದೆ ಸರ್ಕಾರವೇ ಭೂಮಿ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಬಿ.ಪಿ. ಹರೀಶ್‍ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಳೆದ ವರ್ಷ ₹ 50 ಕೋಟಿಯನ್ನು ಸ್ಮಶಾನಕ್ಕೆ ಭೂಮಿ ಖರೀದಿಗಾಗಿ ವೆಚ್ಚ ಮಾಡಲಾಗಿದೆ’ ಎಂದರು.

‘ಅಂಗನವಾಡಿಗಳಿಗೆ ಜಾಗ ನೀಡುವಂತೆ 12 ಸಾವಿರ ಅರ್ಜಿಗಳು ಬಂದಿವೆ.ಇತ್ತೀಚೆಗೆ ನಡೆದ ಡಿಸಿ, ಸಿಇಒಗಳ ಸಭೆಯಲ್ಲಿ, ಇಷ್ಟು ಅರ್ಜಿಗಳಿದ್ದರೂ ಏಕೆ ಜಾಗ ನೀಡಿಲ್ಲ ಎಂದು ನನ್ನನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು’ ಎಂದರು.

ಅನುದಾನ ತಾರತಮ್ಯ ಆರೋಪ; ಮಾತಿನ ಚಕಮಕಿ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆ ಅಡಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಬಿಜೆಪಿ ಜೆಡಿಎಸ್‌ ಸದಸ್ಯರು ಮಾಡಿದ ಆರೋಪ ವಿಧಾನಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು. ಬಿಜೆಪಿಯ ಹರೀಶ್ ಪೂಂಜಾ ‘ಹೆಚ್ಚು ಮಳೆಯಿಂದಾಗಿ ರಸ್ತೆ ಹಾಳಾಗುವ ಕರಾವಳಿ ಭಾಗಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದರು. ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಸುರೇಶ್‍ ಗೌಡ ‘ಒಂದು ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಬಿಜೆಪಿ-ಜೆಡಿಎಸ್‌ನವರಿಗೆ ತಾರತಮ್ಯವಾಗುತ್ತಿದೆ. ಇದನ್ನು ಸರಿಪಡಿಸದೇ ಇದ್ದರೆ ನಾವು ಧರಣಿ ನಡೆಸಬೇಕಾಗುತ್ತದೆ’ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು ‘ಬಿಜೆಪಿ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕರಿಗೆ ಕಡಿಮೆ ಅನುದಾನ ನೀಡಲಾಗುತ್ತಿತ್ತು’ ಎಂದರು. ಆಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.