ADVERTISEMENT

ಒಬಿಸಿ ಪಟ್ಟಿಗೆ 46 ಜಾತಿ ಸೇರಿಸಲು ಶಿಫಾರಸು

ಮುಖ್ಯಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 18:30 IST
Last Updated 12 ಜೂನ್ 2019, 18:30 IST
   

ಬೆಂಗಳೂರು: ಕೇಂದ್ರ ಸರ್ಕಾರದ ‘ಇತರೆ ಹಿಂದುಳಿದ ವರ್ಗಗಳ (ಒಬಿಸಿ)’ ಪಟ್ಟಿಗೆ ಸೇರ್ಪಡೆಯಾಗದೇ ಇರುವ ರಾಜ್ಯದ ಅತ್ಯಂತ ಹಿಂದುಳಿದ46 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಪ್ರಯತ್ನದತ್ತ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.

ಮೇಲ್ವರ್ಗ ಎಂದು ಕರೆಯುವ ಬ್ರಾಹ್ಮಣ, ವೈಶ್ಯ ಸೇರಿದಂತೆ ಇತರ ಜಾತಿಗಳಿಗೆ ಸೇರಿರುವ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೇ 10ರಷ್ಟು ಮೀಸಲಾತಿಯನ್ನುಕೇಂದ್ರ ಸರ್ಕಾರ ಕಲ್ಪಿಸಿದೆ. ಕೇಂದ್ರದ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವ ಸಲುವಾಗಿ ರಾಜ್ಯದಲ್ಲೂ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಉದ್ಯೋಗ ಹಾಗೂ ಶಿಕ್ಷಣಕ್ಕೆ ಮೀಸಲಾತಿ ಸೌಲಭ್ಯ ನೀಡುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ.

‘ಕೇಂದ್ರದ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೆ ತರುವ ಬಗ್ಗೆ ಅಧ್ಯಯನ ನಡೆಸಿ, ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ಮುಖ್ಯ ಕಾರ್ಯದರ್ಶಿಟಿ.ಎಂ.ವಿಜಯಭಾಸ್ಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಇದೇ ಸಮಿತಿಯು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದ ಜಾತಿಗಳನ್ನು ಪಟ್ಟಿ ಮಾಡುತ್ತಿದ್ದು, ಹೊಸದಾಗಿ ಸೇರ್ಪಡೆ ಮಾಡುವಂತೆ ಶಿಫಾರಸುಮಾಡಲು ಸಿದ್ಧತೆ ನಡೆಸಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕೇಂದ್ರದ ಹಿಂದುಳಿದ ವರ್ಗಗಳ ಆಯೋಗ ಸಹ ಈ ಶಿಫಾರಸು ಪರಾಮರ್ಶೆ ಮಾಡಿದ ನಂತರ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಬೇಕಾಗಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸುವಂತೆ ಸಾರ್ವಜನಿಕವಾಗಿ ಕೇಂದ್ರದ ಆಯೋಗ ಸಹ ವಿಚಾರಣೆ ನಡೆಸಲಿದೆ. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ.

ಸಮಿತಿ ಸಭೆ: ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಚನೆಯಾಗಿರುವ ಉನ್ನತ ಮಟ್ಟದ ಸಭೆ ಒಮ್ಮೆ ನಡೆದಿದೆ. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರದ ಜಾತಿಗಳನ್ನು ಒಮ್ಮೆಲೆ ಶಿಫಾರಸು ಮಾಡುವ ಬಗ್ಗೆ ಚರ್ಚಿಸಲಾಗಿದೆ. ಕಾನೂನು ತಜ್ಞರ ಸಲಹೆಗಳನ್ನು ಪಡೆಯಲಾಗುತ್ತಿದೆ.

ಮುಂದೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಹಿಂದುಳಿದ ಮೇಲುವರ್ಗದ ಜಾತಿಗಳಿಗೆ ರಾಜ್ಯದಲ್ಲಿ ಶೇ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಬಗ್ಗೆ ಪರಾಮರ್ಶೆ ನಡೆದಿದ್ದು, ಇದೇ ಸಮಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರದ ಜಾತಿಗಳನ್ನು ಸೇರ್ಪಡೆ ಮಾಡುವಂತೆ ಕೇಂದ್ರವನ್ನು ಕೋರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಿಗೆ ಸೇರಲು ನಿರೀಕ್ಷೆಯಲ್ಲಿರುವ ಜಾತಿಗಳು

ಕಾಡುಗೊಲ್ಲ, ಹಟ್ಟಿಗೊಲ್ಲ, ದಾವಾರಿ, ಕಲ್ಲುಕುಟಿಗ ಉಪ್ಪಾರ, ಪಾಡಿ, ಆಗಮುಡಿ, ಬಾವಂದಿ, ಬೈರಾಗಿ, ಗೋಸಾಯಿ, ಹೆಳವ, ಮುತ್ರಾಚ, ಮೊಗೇರ, ಬುಂಡೆ–ಬೆಸ್ತರು, ಕಬ್ಬೇರ/ಕಬ್ಬೇರ್, ಖಾರ್ವಿ, ಕಿಳ್ಳೇಕ್ಯಾತ, ಬೋಗಂ, ಯೆಳಗಲ್, ಗಣಿಕ, ಕಲಾವಂತ, ಗಾಣಿಗ ಮನೆ, ಗೂರ್ಖಾ, ಮಲಯ, ಗೌರಿಗ, ಪಂಗುಯಲ್, ಪಂಗುಸಲ್, ಕಲಾರಿ, ಕಲ್ಲಾರ, ಡೆರಿಯ, ಸರಂತ, ಗೌಳಿ, ತೆಲುಗು ಗೌಡ (ಚಿಕ್ಕಮಗಳೂರು– ಹಾಸನ ಜಿಲ್ಲೆ), ಬಂಜಾರಿ, ಬ್ರಿಂಜಾರಿ, ವಂಜಾರ, ವಂಜಾರಿ, ಲಾಂಬಾಡಿ, ಗೋರೆ/ಗೋರಿಯಾ, ರೆಮೊಶಿ, ಪರದೇಸಿ, ನಂದಿವಾಳ,ದೇವದಾಸಿ, ಬಸವಿ,ಲಾಡರು/ ಲಾಡರ/ ಲಾಡರ್,ಜೀನಾಗರ, ತೆವಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.