ADVERTISEMENT

ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

ಖಲೀಲಅಹ್ಮದ ಶೇಖ
Published 20 ನವೆಂಬರ್ 2025, 23:47 IST
Last Updated 20 ನವೆಂಬರ್ 2025, 23:47 IST
   

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಸಹಾಯವಾಣಿಗೆ ಒಟ್ಟು 6.87 ಲಕ್ಷ ಕರೆಗಳು ಬಂದಿದ್ದು, ಇದರಲ್ಲಿ 33,945 ‌ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬಾಲ್ಯ ವಿವಾಹ ಮಾಡಲು ಯತ್ನಿಸಿದ ಬಗ್ಗೆ 8,171 ದೂರುಗಳು ಬಂದಿವೆ.

ಮಕ್ಕಳ ರಕ್ಷಣೆಗಾಗಿ ಆರಂಭಿಸಿರುವ ‘ನೋವಿನ ಧ್ವನಿ’ ಸಹಾಯವಾಣಿಗೆ (1098) ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ನಾಪತ್ತೆ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012), ಮಕ್ಕಳ ಕಳ್ಳಸಾಗಣೆ, ದೈಹಿಕ ಹಿಂಸೆ, ಮಾನಸಿಕ ಹಿಂಸೆ, ಭಿಕ್ಷಾಟನೆ, ಪೋಷಕರ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳು ಸೇರಿದಂತೆ ಹಲವು ರೀತಿಯ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರುಗಳು ಬಂದಿವೆ. ಈ ಎಲ್ಲಾ ಕರೆಗಳಿಗೂ ಮಕ್ಕಳ ರಕ್ಷಣಾ ಘಟಕ ಸ್ಪಂದಿಸುತ್ತಿದ್ದು, ಸತ್ಯಾಂಶ ಪರಿಶೀಲಿಸಿ ಬಳಿಕ ಕ್ರಮಕ್ಕೆ ಮುಂದಾಗುತ್ತಿದೆ.

‘2023ರ ಸೆಪ್ಟೆಂಬರ್‌ನಿಂದ 2025ರ ಅಕ್ಟೋಬರ್‌ವರೆಗೆ ಒಟ್ಟು 6.87 ಲಕ್ಷ ಕರೆಗಳಲ್ಲಿ 81,303 ಕರೆಗಳಿಗೆ ಮಾಹಿತಿ ನೀಡಿ ವಿಲೇವಾರಿ ಮಾಡಲಾಗಿದೆ. 5.72 ಲಕ್ಷ ಅಸಂಬಂಧಿತ ಕರೆಗಳು ಬಂದಿದ್ದವು’ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಸಹಾಯವಾಣಿಗೆ ಬಂದಿದ್ದ ಕರೆಗಳನ್ನು ಆಧರಿಸಿ, ಬೆಂಗಳೂರು ನಗರದಿಂದ 5,273, ಮೈಸೂರು ಜಿಲ್ಲೆಯಿಂದ 2,054, ಕಲಬುರಗಿ ಜಿಲ್ಲೆಯಿಂದ 1,507, ಧಾರವಾಡ ಜಿಲ್ಲೆಯಿಂದ 1,264, ಹಾಸನದಿಂದ 1,265, ಬೆಳಗಾವಿಯಿಂದ 1,209, ಮಂಡ್ಯದಿಂದ 1,144, ವಿಜಯಪುರ ಜಿಲ್ಲೆಯಿಂದ 1,139, ಉತ್ತರ ಕನ್ನಡ ಜಿಲ್ಲೆಯಿಂದ 297 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷ ಶಶಿಧರ ಕೋಸಂಬೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೀದರ್ ಜಿಲ್ಲೆಯ ಕೆಲ ಪ್ರಕರಣಗಳಲ್ಲಿ ಬಾಲ್ಯ ವಿವಾಹ ವಿರೋಧಿಸಿ ಹೆಣ್ಣು ಮಕ್ಕಳೇ ಕರೆ ಮಾಡಿದ್ದರು. ಬಹುತೇಕ ಪ್ರಕರಣಗಳಲ್ಲಿ ಗ್ರಾಮದ ಬೇರೆ ವ್ಯಕ್ತಿಗಳಿಂದ ಕರೆಗಳು ಬರುತ್ತಿವೆ. ಆಯೋಗವು ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮ ಪಂಚಾಯಿತಿ, ಶಾಲಾ–ಕಾಲೇಜುಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕೈಜೋಡಿಸಬೇಕು’ ಎಂದರು.

‘ಮಕ್ಕಳ ರಕ್ಷಣೆಗೆ ಆದ್ಯತೆ’

‘ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಶೌಚಾಲಯದ ಸಮಸ್ಯೆ ಶಿಕ್ಷಕರು ಪಾಠ ಮಾಡದಿರುವುದು ಶಿಕ್ಷಕರ ವರ್ತನೆ ಸರಿ ಇಲ್ಲದಿರುವುದು ವಸತಿನಿಲಯಗಳಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳು 1098ಕ್ಕೆ ಕರೆ ಮಾಡಬಹುದು. ಮಕ್ಕಳ ಸಮಸ್ಯೆಗಳಿಗೆ ಸಕಾಲದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಕ್ಕಳಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಹಾಯವಾಣಿ ಸಿಬ್ಬಂದಿ ಕ್ರಮ ವಹಿಸಬೇಕು’ ಎಂದು ಶಶಿಧರ ಕೋಸಂಬೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.