ADVERTISEMENT

ರಾಜ್ಯದಲ್ಲಿ 5 ವರ್ಷಗಳಲ್ಲಿ 82 ಹುಲಿಗಳ ಸಾವು:10 ದಿನಗಳಲ್ಲಿ ಸಮಗ್ರ ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:31 IST
Last Updated 1 ಜುಲೈ 2025, 15:31 IST
<div class="paragraphs"><p>ಹುಲಿ: ಸಾಂದರ್ಭಿಕ ಚಿತ್ರ</p></div>

ಹುಲಿ: ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಎಲ್ಲ ಹುಲಿಗಳ ಸಾವಿನ ಬಗ್ಗೆ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಸತ್ತಿರುವ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸತ್ತಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜ ಸಾವಿಗೆ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆದು ವರದಿ ಬಂದಿದೆಯೇ’ ಎಂಬ ಮಾಹಿತಿ ನೀಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಅವರು ಸೂಚಿಸಿದ್ದಾರೆ. 

ADVERTISEMENT

‘ಮೃತಪಟ್ಟ ಯಾವುದಾದರೂ ಹುಲಿಗಳ ಅಂಗಾಂಗ ಅಂದರೆ ಉಗುರು, ಹಲ್ಲು ಇತ್ಯಾದಿಗಳನ್ನು ತೆಗೆಯಲಾಗಿತ್ತೆ? ಹುಲಿಗಳ ಹತ್ಯೆ ಆಗಿದ್ದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆಯೇ? ಎಷ್ಟು ಹುಲಿಗಳ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ? ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಎಷ್ಟು ಪ್ರಕರಣಗಳು ತನಿಖಾ ಹಂತದಲ್ಲಿವೆ. ಯಾವ ಕಾರಣಕ್ಕೆ ತನಿಖೆ ವಿಳಂಬವಾಗಿದೆ ಎಂಬ ಬಗ್ಗೆ ವರದಿ ನೀಡಬೇಕು’ ಎಂದಿದ್ದಾರೆ.

ಚಿರತೆ ಹತ್ಯೆ ತನಿಖೆ: ಮಲೆಮಹದೇಶ್ವರ ಅರಣ್ಯ ಪ್ರದೇಶದ ಹೂಗ್ಯಂನಲ್ಲಿ 5 ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟ ಘಟನೆಗೂ ಕೆಲವು ದಿನಗಳ ಮೊದಲು ಕೌದಳ್ಳಿ ವಲಯ, ರಾಮಾಪುರ–ಮಾರ್ಟಳ್ಳಿ ಗಡಿಯಲ್ಲಿ ಚಿರತೆಯೊಂದರ ಹತ್ಯೆ ಆಗಿತ್ತು. ಅದರ ಕಾಲುಗಳನ್ನು ಕತ್ತರಿಸಲಾಗಿತ್ತು. ಈ ಹತ್ಯೆಯ ಕುರಿತು ಎಪಿಸಿಸಿಎಫ್‌ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಖಂಡ್ರೆ ಆದೇಶಿಸಿದ್ದಾರೆ.

ಚಿರತೆಯ ಅಂಗಾಂಗ ಕತ್ತರಿಸಿರುವುದು ನಿಜವಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸಚಿವರು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.