ADVERTISEMENT

4 ವರ್ಷಗಳಲ್ಲಿ 8,569 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು

ಖಲೀಲಅಹ್ಮದ ಶೇಖ
Published 24 ಡಿಸೆಂಬರ್ 2024, 0:34 IST
Last Updated 24 ಡಿಸೆಂಬರ್ 2024, 0:34 IST
ಡಾ. ನಾಗಲಕ್ಷ್ಮಿ ಚೌಧರಿ
ಡಾ. ನಾಗಲಕ್ಷ್ಮಿ ಚೌಧರಿ   

ಬೆಂಗಳೂರು: ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನು ಮತ್ತು ಕಾಯ್ದೆಗಳಿದ್ದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನಿತ್ಯ ಇಂತಹ ನೂರಾರು ದೂರುಗಳು ಬರುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 8,569 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

2021 ರಿಂದ 2024ರ ನವೆಂಬರ್‌ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಪ್ರೇಮ ಪ್ರಕರಣ, ಜೀವನಾಂಶ, ಪೊಲೀಸ್‌ ದೌರ್ಜನ್ಯ, ವಿವಾಹ ವಿಚ್ಛೇದನ ಸೇರಿ ಎಂಟು ಸಾವಿರಕ್ಕೂ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ಬಂದಿವೆ. ಇದರಲ್ಲಿ ರಕ್ಷಣೆ ಕೋರಿ ಬಂದ ಪ್ರಕರಣಗಳ ಸಂಖ್ಯೆಯೇ ಅಧಿಕ.

‘ಆಸ್ತಿ ವ್ಯಾಜ್ಯ, ಮಹಿಳೆಯರನ್ನು ಚುಡಾಯಿಸುವುದು, ಪ್ರೇಮ ಪ್ರಕರಣಗಳಲ್ಲಿ ಬೆದರಿಕೆ ಹಾಕುವುದು ಸೇರಿ ನಾಲ್ಕು ವರ್ಷಗಳಲ್ಲಿ ರಕ್ಷಣೆ ಒದಗಿಸುವಂತೆ ಮಹಿಳಾ ಆಯೋಗಕ್ಕೆ 2,494 ಪ್ರಕರಣಗಳು ದಾಖಲಾಗಿವೆ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1,707 ಹಾಗೂ ವರದಕ್ಷಿಣೆ ಕಿರುಕುಳ ನೀಡಿದ 455 ಪ್ರಕರಣಗಳು ಸೇರಿವೆ. ಸಂತ್ರಸ್ತ ಮಹಿಳೆಯರಿಗೆ ಆಯೋಗವು ಪೊಲೀಸ್‌ ಇಲಾಖೆಯ ಸಹಕಾರದ ಮೂಲಕ ರಕ್ಷಣೆ ಒದಗಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ। ನಾಗಲಕ್ಷ್ಮಿ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಸಂತ್ರಸ್ತ ಮಹಿಳೆಯರಿಗೆ ಕೌನ್ಸೆಲಿಂಗ್‌ ಮಾಡುತ್ತಿದ್ದೇವೆ. ಕೌಟುಂಬಿಕ ಸಮಸ್ಯೆಗಳಿಗೆ ಕೌನ್ಗೆಲಿಂಗ್‌ ಸಂದರ್ಭದಲ್ಲಿ ಪರಿಹಾರ ಸಿಗುತ್ತವೆ. ಕೆಲ ಪ್ರಕರಣಗಳಲ್ಲಿ ಗಂಡ ತನ್ನ ಹೆಂಡತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುತ್ತಾನೆ. ಅಂತಹ ಪ್ರಕರಣಗಳನ್ನು ಪೊಲೀಸ್‌ ಇಲಾಖೆಯ ನೆರವಿನೊಂದಿಗೆ, ಆಯಾ ಜಿಲ್ಲೆಯ ಎಸ್‌ಪಿಗಳ ಮೂಲಕ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಪಡೆದುಕೊಂಡು ಪ್ರಕರಣ ಇತ್ಯರ್ಥಗೊಳಿಸಲಾಗುತ್ತದೆ’ ಎಂದು ವಿವರಿಸಿದರು.

‘ಅತ್ಯಾಚಾರದಂತಹ ಪ್ರಕರಣಗಳು ನಡೆದಾಗ ಸಂತ್ರಸ್ತೆಯೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬ ಬಗ್ಗೆ ಕೆಳಹಂತದ ಪೊಲೀಸರಿಗೆ ಅರಿವು ಇರುವುದಿಲ್ಲ. ಆ ಪ್ರಕರಣದ ಸೂಕ್ಷ್ಮತೆ ಮತ್ತು ಅದರ ಕಾಯ್ದೆ–ಕಾನೂನುಗಳ ಬಗ್ಗೆಯೂ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಸಂತ್ರಸ್ತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಬೇಕು. ಆದರೆ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಈ ವಾತಾವರಣವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೊಲೀಸರ ದೌರ್ಜನ್ಯ:198 ಪ್ರಕರಣಗಳು ದಾಖಲು’

‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರು ಸಂತ್ರಸ್ತ ಮಹಿಳೆಯರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ನಾಲ್ಕು ವರ್ಷಗಳಲ್ಲಿ ಪೊಲೀಸರ ದೌರ್ಜನ್ಯದ ವಿರುದ್ಧ 198 ಪ್ರಕರಣಗಳು ದಾಖಲಾಗಿದ್ದು ಇವುಗಳಲ್ಲಿ 177 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 21 ಪ್ರಕರಣಗಳ ಬಾಕಿ ಇವೆ’ ಎಂದು ಡಾ. ನಾಗಲಕ್ಷ್ಮಿ ಚೌಧರಿ ಮಾಹಿತಿ ನೀಡಿದರು. ‘ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಮಹಿಳಾಪರ ವಾತಾವರಣ ನಿರ್ಮಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ನಿವೃತ್ತ ನ್ಯಾಯಮೂರ್ತಿಗಳು ಕಾನೂನು ತಜ್ಞರ ಸಮಿತಿ ರಚಿಸಿ ಅವರು ನೀಡುವ ಸಲಹೆಗಳನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.