ADVERTISEMENT

ಸುಳ್ಳು ಪ್ರಕರಣ ಸೃಷ್ಟಿ: ನ್ಯಾಯಾಲಯ ಆದೇಶಿಸಿದರೂ ದಾಖಲಾಗದ ಪ್ರಕರಣ

ಕರ್ತವ್ಯದಲ್ಲಿ ಮುಂದುವರಿದ ಆರೋಪಿ ಪೊಲೀಸ್‌ ಅಧಿಕಾರಿ

ಶಿವಪ್ರಸಾದ್ ರೈ
Published 7 ಜೂನ್ 2025, 23:30 IST
Last Updated 7 ಜೂನ್ 2025, 23:30 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಮೈಸೂರು: ಪತ್ನಿ ನಾಪತ್ತೆಯಾದ ಕುರಿತು ದೂರು ನೀಡಿದವರ ವಿರುದ್ಧವೇ ಪತ್ನಿಯ ಕೊಲೆ ಆರೋಪ ಹೊರಿಸಿ ಸುಳ್ಳು ಪ್ರಕರಣ ದಾಖಲಿಸಿದ್ದ ಅಂದಿನ ಬೈಲಕುಪ್ಪೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಜಿ.ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸುವಂತೆ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಆದೇಶಿಸಿ ಒಂದು ತಿಂಗಳು ಕಳೆದರೂ ಪ್ರಕರಣ ದಾಖಲಾಗಿಲ್ಲ. ಪೊಲೀಸ್‌ ಇಲಾಖೆಯೂ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ.

‘ದೂರುದಾರ ಸುರೇಶ್‌ ನಿರಪರಾಧಿ’ ಎಂದು ನ್ಯಾಯಾಲಯವು ಏಪ್ರಿಲ್‌ 23ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಿತ್ತು. ‘ಅಧಿಕಾರಿ ಬಿ.ಜಿ.ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್‌ 193, 195 ರ ಅಡಿ (ಸುಳ್ಳು ಪ್ರಕರಣ ಸೃಷ್ಟಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಕೆ) ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್‌ ಸೂಚಿಸಿದ್ದರು. ಆದರೆ, ಪ್ರಕರಣ ದಾಖಲಾಗಿಲ್ಲ. ಆರೋಪಿ ಸ್ಥಾನದಲ್ಲಿರುವ ಪ್ರಕಾಶ್‌ ಅವರನ್ನು ಕುಶಾಲನಗರ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಮುಂದುವರಿಸಲಾಗಿದೆ.

‘ಮುಖ್ಯ ಆಡಳಿತಾಧಿಕಾರಿ ವರ್ಗಾವಣೆಯಾಗಿರುವುದರಿಂದ ಪ್ರಕರಣ ದಾಖಲಾಗುವುದು ವಿಳಂಬವಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಆರೋಪಿ ಅಧಿಕಾರಿಯನ್ನು ಕರ್ತವ್ಯದಲ್ಲಿ ಮುಂದುವರೆಸಿರುವುದು ಆಶ್ಚರ್ಯ ಮೂಡಿಸಿದೆ. ಸುರೇಶ್‌ ಕುಶಾಲನಗರದಲ್ಲೇ ವಾಸವಿರುವುದರಿಂದ, ಅಧಿಕಾರಿಯು ಪ್ರಭಾವ ಬಳಸಿ ತೊಂದರೆ ನೀಡುವ ಸಾಧ್ಯತೆಯೂ ಇದೆ’ ಎಂದು ಸುರೇಶ್‌ ಪರ ವಕೀಲ ಪಾಂಡು ಪೂಜಾರಿ ಆತಂಕ ವ್ಯಕ್ತಪಡಿಸಿದರು.

‘ನ್ಯಾಯಾಲಯದ ಸೂಚನೆಯ ಬಳಿಕವೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಲಾಖೆಯೂ ವಿಳಂಬ ಮಾಡುತ್ತಿರುವುದು ಅನುಮಾನ ಮೂಡಿಸಿದೆ’ ಎಂದು ಹೇಳಿದರು.

‘ಪ್ರಕರಣದ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಜಿತೇಂದ್ರ ಕುಮಾರ್‌, ಬೆಟ್ಟದಪುರ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಎತ್ತಿಮನಿ ವಿರುದ್ಧ ಇಲಾಖೆ ತನಿಖೆ ನಡೆಸಬೇಕು’ ಎಂದು ಮೈಸೂರು ಐಜಿಪಿಗೆ ನ್ಯಾಯಾಲಯವು ಸೂಚಿಸಿತ್ತು.

‘ಕೆಲ ದಿನಗಳ ಹಿಂದೆ ಸುರೇಶ್‌ ಕುಟುಂಬವನ್ನು ಕರೆಸಿ ಎಎಸ್‌ಪಿ ವಿಚಾರಣೆ ನಡೆಸಿದ್ದು, ಪೊಲೀಸ್‌ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಮಾಹಿತಿಗಾಗಿ ಐಜಿಪಿ ಅವರಿಗೆ ಕರೆ ಮಾಡಿದಾಗ ಅವರು ಲಭ್ಯರಾಗಲಿಲ್ಲ.

ಪ್ರಕರಣದ ಹಿನ್ನೆಲೆ: ನಾಲ್ಕು ವರ್ಷದ ಹಿಂದೆ, ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ದೊರಕಿದ್ದ ಶವವನ್ನು, ಕುಶಾಲನಗರದ ಮಹಿಳೆ ಮಲ್ಲಿಗೆಯವರದ್ದು ಎಂದು ಬಿಂಬಿಸಿ ‘ಮಲ್ಲಿಗೆಯನ್ನು ಆಕೆಯ ಗಂಡ ಸುರೇಶ್‌ ಕೊಲೆ ಮಾಡಿದ್ದಾನೆ’ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುರೇಶ್ ವಿಚಾರಾಣಾಧೀನ ಕೈದಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 

ಏ.1ರಂದು ಮಲ್ಲಿಗೆಯು ತನ್ನ ಪ್ರಿಯತಮ ಗಣೇಶ್‌ನೊಂದಿಗೆ ಪತ್ತೆಯಾದ ಬಳಿಕ ಪ್ರಕರಣ ಅಚ್ಚರಿಯ ತಿರುವು ಪಡೆದುಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪೊಲೀಸ್‌ ತನಿಖಾಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿಹಿಡಿದು ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.