ADVERTISEMENT

ವಿಧಾನಸಭೆಗೆ ಗೈರು, ಪರಿಷತ್‌ಗೆ ಹಾಜರು: ಕಾಂಗ್ರೆಸ್‌ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 7:08 IST
Last Updated 10 ಡಿಸೆಂಬರ್ 2020, 7:08 IST
   

ಬೆಂಗಳೂರು: ವಿಧಾನಸಭೆ ಕಲಾಪ ಬಹಿಷ್ಕರಿಸಿ, ವಿಧಾನ ಪರಿಷತ್‌ ಕಲಾಪದಲ್ಲಿ ಮಾತ್ರ ಭಾಗವಹಿಸುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿರುವ ಮೊದಲ ಮಹಡಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆದಿದೆ. ಪರಿಷತ್‌ ಕಲಾಪದಲ್ಲಿ ಭಾಗವಹಿಸಿ, ಗೋ ಹತ್ಯೆ ನಿಷೇಧ ಕಾಯ್ದೆ ಮೇಲಿನ ಚರ್ಚೆಯ ಬಳಿಕ ‘ವಿಭಜನೆ ಮತ’ಕ್ಕೆ ಆಗ್ರಹಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕಾರಣ, ಅದನ್ನು ವಿರೋಧಿಸಿ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ತೀವ್ರ ವಿರೋಧದ ನಡುವೆಯೂ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕರಿಸಿದ ಆಡಳಿತ ಪಕ್ಷದ ನಡೆಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿಧಾನಸಭೆ ಕಲಾಪ ಬಹಿಷ್ಕರಿಸಿದ ಕಾರಣ ಸಭಾಧ್ಯಕ್ಷರ ಊಚನೆಯಂತೆ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯುತ್ತಿದ್ದ ಕೊಠಡಿಗೆ ಬಂದ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರನ್ನು ಸಂಧಾನಕ್ಕೆ ಆಹ್ವಾನಿಸಿದರು. ಈ ವೇಳೆ ಅವರು ಸಿಎಲ್‌ಪಿ ಸಭೆಯ ಬಳಿಕ ಬರುವುದಾಗಿ ಹೇಳಿದರು.

ಸಭೆಯಲ್ಲಿ ಡಿ.ಕೆ. ಶಿವಕುಮಾರ್‌, ಜಿ. ಪರಮೇಶ್ವರ, ತುಕಾರಾಂ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ, ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ,ಎಸ್.ಆರ್.ಪಾಟೀಲ, ಈಶ್ವರ್ ಖಂಡ್ರೆ, ಅಜಯ್ ಸಿಂಗ್, ಲಕ್ಷ್ಮೀ‌ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರಿಜ್ವಾನ್ ಅರ್ಷದ್ ಸೇರಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.