ADVERTISEMENT

ಪರಿಹಾರದ ಹೆಸರಿನಲ್ಲಿ ವಂಚನೆ: ಬಿಡಿಎ ಎಇಇ ಮೇಲೆ ಎಸಿಬಿ ದಾಳಿ

6 ಸ್ಥಳಗಳಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 13:09 IST
Last Updated 26 ಏಪ್ರಿಲ್ 2019, 13:09 IST
ಬಿಡಿಎ ಎಇಇ ಕೃಷ್ಣಲಾಲ್‌ ಕಚೇರಿ ಶೋಧಿಸುತ್ತಿರುವ ಎಸಿಬಿ ಅಧಿಕಾರಿಗಳು
ಬಿಡಿಎ ಎಇಇ ಕೃಷ್ಣಲಾಲ್‌ ಕಚೇರಿ ಶೋಧಿಸುತ್ತಿರುವ ಎಸಿಬಿ ಅಧಿಕಾರಿಗಳು   

ಬೆಂಗಳೂರು: ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪರಿಹಾರ ನೀಡಿ ಸರ್ಕಾರಕ್ಕೆ ನಷ್ಟ ಮಾಡಿದ ಆರೋಪ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಕೃಷ್ಣಲಾಲ್‌ ಮತ್ತು ಅವರ ಆಪ್ತರ ಮನೆ–ಕಚೇರಿ ಸೇರಿ 6 ಸ್ಥಳಗಳ ಮೇಲೆ ಶುಕ್ರವಾರ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ದಾಳಿ ಮಾಡಿದೆ.

ಬೆಳಿಗ್ಗೆಯೇ ವಿವಿಧ ತಂಡಗಳಲ್ಲಿ ಧಾವಿಸಿದ ಎಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವು ಪಡೆದು ಕೃಷ್ಣಲಾಲ್‌ ಅವರ ಸಂಜಯನಗರದ ಮನೆ, ಇವರು ಹಿಂದೆ ಕೆಲಸ ಮಾಡುತ್ತಿದ್ದ ಬಿಬಿಎಂಪಿಯ ಮಹಾದೇವಪುರ ವಲಯ ಕಚೇರಿ, ಬಿಡಿಎ ಎಇಇ ಕಚೇರಿ, ಈ ಅಧಿಕಾರಿಗೆ ಆಪ್ತರಾದ ಭುವನೇಶ್ವರಿ ನಗರದ ಟೆಲಿಕಾಂ ಬಡಾವಣೆಯಲ್ಲಿರುವ ದೀಪಕ್‌ ಕುಮಾರ್ ಮನೆ, ಅಮಿತ್‌ ರಿಕಬ್‌ಚಂದ್‌ ಜೈನ್‌ ಅವರ ಗಾಂಧಿನಗರದಲ್ಲಿರುವ ಮನೆ, ಚಿಕ್ಕಪೇಟೆಯಲ್ಲಿರುವ ಕಚೇರಿಗಳನ್ನು ಶೋಧಿಸಲಾಗಿದೆ.

ಬಿಬಿಎಂಪಿ ಸಹಾಯಕ ಎಂಜಿನಿಯರ್‌ ಅಗಿರುವ ಕೃಷ್ಣಲಾಲ್‌ ಈಗ ಎರವಲು ಸೇವೆ ಮೇಲೆ ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಕ್ಕಾಪಟ್ಟೆ ಪರಿಹಾರ ವಿತರಿಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ADVERTISEMENT

ಕೆಲವು ಸರ್ಕಾರಿ ಜಾಗವನ್ನು ಖಾಸಗಿ ಜಾಗವೆಂದು ಬಿಂಬಿಸಿ ಪರಿಹಾರ ನೀಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಶಂಕಿಸಿದ್ದಾರೆ.

ಸುಮಾರು 7 ಕಿ.ಮೀ ಉದ್ದದ ಭಟ್ಟರಳ್ಳಿ–ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನ‍‍ಪಡಿಸಿಕೊಂಡಿರುವ ಜಮೀನಿಗೆ ನೀಡಿರುವ ಪರಿಹಾರದಿಂದ ಸರ್ಕಾರಕ್ಕೆ ಸುಮಾರು ₹ 60ಕೋಟಿ ನಷ್ಟ ಮಾಡಲಾಗಿದೆ. ಹೀಗೆ, ಎಷ್ಟೋ ರಸ್ತೆಗಳ ವಿಸ್ತರಣೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎನ್ನಲಾಗಿದೆ.

ದೀಪಕ್‌ ಕುಮಾರ್ ಮನೆಯಲ್ಲಿ ಬಿಬಿಎಂಪಿಗೆ ಸೇರಿದ ಅಧಿಕೃತ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ಮಧ್ಯವರ್ತಿಗಳ ಹೆಸರು ಕೇಳಿಬಂದಿದ್ದು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ.

ಎಸಿಬಿ ಐ.ಜಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ನಡೆದ ದಾಳಿ ನೇತೃತ್ವವನ್ನು ಡಾ. ಸಂಜೀವ ಪಾಟೀಲ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.