ADVERTISEMENT

ಅಭಿವೃದ್ಧಿ ಹಕ್ಕು ವರ್ಗಾವಣೆ ವಂಚನೆ: ಮುಂದುವರಿದ ದಾಳಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:00 IST
Last Updated 4 ಮೇ 2019, 20:00 IST
   

ಬೆಂಗಳೂರು: ಮಹಾನಗರಪಾಲಿಕೆ ರಸ್ತೆಗಳ ವಿಸ್ತರಣೆಗೆ ಸ್ವಾಧೀನ‍ಪಡಿಸಿಕೊಂಡ ನಿವೇಶನಗಳು ಮತ್ತು ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ‘ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಹಕ್ಕು’ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ದಾಳಿ ಮುಂದುವರಿದಿದ್ದು, ‘ವಾಲ್‌ಮಾರ್ಕ್‌ ರಿಯಾಲಿಟಿ ಹೋಲ್ಡಿಂಗ್‌ ಪ್ರೈವೇಟ್‌ ಲಿ’ ಕಚೇರಿ ಸೇರಿದಂತೆ ಐದು ಸ್ಥಳಗಳಲ್ಲಿ ಶೋಧ ನಡೆಸಿದೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ವಾಲ್‌ಮಾರ್ಕ್‌ ಕಂಪನಿ ಕಚೇರಿ, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಂಪನಿ ನಿರ್ದೇಶಕ ರತನ್‌ ಬಾಬುಲಾಲ್‌ ಲಾಥ್‌ ಮನೆ, ಕಂಪನಿ ಉದ್ಯೋಗಿ ಅಮಿತ್‌ ಜೆ. ಬೋಳಾರ್‌ ಅಲಿಯಾಸ್‌ ಅಮಿತ್‌ ಅವರ ಇಂದಿರಾನಗರದ ಮನೆ, ಗೌತಮ್‌ ಎಂಬುವರ ಹೊರಮಾವು ಮನೆ, ಮುನಿರಾಜಪ್ಪ ಎಂಬುವರ ಕಲ್ಕೆರೆ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಕೆಲವರ ಮನೆಗಳಲ್ಲಿ ಟಿಡಿಆರ್‌ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಬಿಡಿಎ, ಬಿಬಿಎಂಪಿ ಮತ್ತು ವಾಲ್‌ಮಾರ್ಕ್‌ ಕಚೇರಿ ಕಂಪ್ಯೂಟರ್‌ಗಳಲ್ಲಿ ಟಿಡಿಆರ್‌ಗೆ ಸಂಬಂಧಿಸಿದ ಡೇಟಾಗಳನ್ನು ನಾಶಪಡಿಸಲಾಗಿದ್ದು, ಅವುಗಳನ್ನು ಮರಳಿ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಸಿಬಿ ಐ.ಜಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಎಸ್ಪಿ ಡಾ. ಸಂಜೀವ ಪಾಟೀಲ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್‌ಪಿ ರವಿಕುಮಾರ್‌ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣವೇನು?: ಟಿಡಿಆರ್‌ ಹಕ್ಕು ವರ್ಗಾವಣೆ ಪ್ರಕ್ರಿಯೆಯಲ್ಲಿ ವಂಚನೆ ಎಸಗುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿರುವ ಸಂಬಂಧ ಎಸಿಬಿಗೆ ಇತ್ತೀಚೆಗೆ ದೂರು ಬಂದಿತ್ತು. ದೂರು ಆಧರಿಸಿ ಬಿಡಿಎ ಎಇಇ ಕೃಷ್ಣಲಾಲ್‌ (ನಿಯೋಜನೆ) ಅವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ದಾಳಿಗಳೂ ನಡೆದಿವೆ.

ಬಿಬಿಎಂಪಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಜಾಗಕ್ಕಿಂತಲೂ ಹೆಚ್ಚು ಟಿಡಿಆರ್‌ ಹಕ್ಕು ಕೊಡುವ ಮೂಲಕ ಕೃಷ್ಣಲಾಲ್‌ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮ ಉಲ್ಲಂಘಿಸಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು 7 ಕಿ.ಮೀ ಉದ್ದದ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನ‍‍ಪಡಿಸಿಕೊಂಡಿರುವ ಜಮೀನಿಗೆ ನೀಡಿರುವ ಪರಿಹಾರದಿಂದ ಸರ್ಕಾರಕ್ಕೆ ಸುಮಾರು ₹ 56 ಕೋಟಿ ನಷ್ಟ ಆಗಿದೆ. ಇದೊಂದು ಸಣ್ಣ ಪ್ರಕರಣ ಅಷ್ಟೆ. 15 ವರ್ಷಗಳ ಹಿಂದೆಟಿಡಿಆರ್‌ ನಿಯಮ ಜಾರಿಗೆ ಬಂದಿದ್ದು, ಅಲ್ಲಿಂದ ತನಿಖೆ ನಡೆದರೆ ಸಾವಿರಾರು ಕೋಟಿ ಹಗರಣ ಹೊರಬರಲಿದೆ ಎನ್ನಲಾಗಿದೆ.

ಕವಡೇನಹಳ್ಳಿಯ ಸರ್ವೆ ನಂನರ್‌ 132ರಲ್ಲಿ ವಶಪಡಿಸಿಕೊಂಡ ಜಮೀನಿಗೆ 1500 ಚದರ ಮೀಟರ್‌ ಟಿಡಿಆರ್‌ ಹಕ್ಕು ನೀಡಲಾಗಿತ್ತು. ಇದರ ಪಕ್ಕ ಮತ್ತೊಂದು ಸೊನ್ನೆ ಸೇರಿಸಿ 15 ಸಾವಿರ ಚದರ ಮೀಟರ್‌ ಟಿಡಿಆರ್ ಹಕ್ಕನ್ನು ‘ಫಿನಿಕ್ಸ್‌ ಡೆವಲಪರ್ಸ್‌’ಗೆ ಮಾರಾಟ ಮಾಡಲಾಗಿದೆ. ರೇವಣ್ಣ ಎಂಬುವರು ಜಮೀನಿನ ಮೂಲ ಮಾಲೀಕರು. ಅವರು ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದರು.

ರಸ್ತೆ ವಿಸ್ತರಣೆಗೆ ಸ್ವಾಧೀನ ಮಾಡಿಕೊಂಡ ನಿವೇಶನಗಳ ಟಿಡಿಆರ್‌ ಹಕ್ಕನ್ನು ಈಗಿನ ಮಾಲೀಕರಿಗೆ ಕೊಡಬೇಕಾಗಿತ್ತು. ಆದರೆ, ರೇವಣ್ಣನವರ ಮಕ್ಕಳಿಗೆ ನೀಡಲಾಗಿದೆ. ಅವರಿಂದ ₹ 40 ಲಕ್ಷಕ್ಕೆ ಹಕ್ಕನ್ನು ಖರೀದಿಸಿದ ‘ವಾಲ್‌ಮಾರ್ಕ್‌’ ಕಂಪೆನಿ ₹ 56 ಕೋಟಿಗೆ ಫಿನಿಕ್ಸ್‌ಗೆ ಡೆವಲಪರ್ಸ್‌ಗೆ ಮರು ಮಾರಾಟ ಮಾಡಿದೆ ಎಂಬ ಸಂಗತಿ ಎಸಿಬಿ ತನಿಖೆಯಿಂದ ಪತ್ತೆಯಾಗಿದೆ.

ಬಿಬಿಎಂಪಿಗೆ ಎಸಿಬಿ ಪತ್ರ
2005ರಲ್ಲಿ ಟಿಡಿಆರ್‌ ನಿಯಮ ಜಾರಿಗೆ ಬಂದಾಗಿನಿಂದ ಬೆಂಗಳೂರು ನಗರದಲ್ಲಿ ವಿಸ್ತರಣೆ ಮಾಡಿರುವ ರಸ್ತೆಗಳ ಮಾಹಿತಿ ನೀಡುವಂತೆ ಎಸಿಬಿ ಅಧಿಕಾರಿಗಳು ಬಿಬಿಎಂಪಿ ಕಮಿಷನರ್‌ ಮಂಜುನಾಥ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದಾರೆ.

ಬಿಡಿಎ ಅಧಿಕಾರಿ ಕೃಷ್ಣಲಾಲ್‌ ಮನೆ, ಕಚೇರಿ ಮೇಲಿನ ದಾಳಿ ಬಳಿಕ ಬೆಚ್ಚಿ ಬೀಳಿಸುವ ಮಾಹಿತಿಗಳು ಎಸಿಬಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ. ಇದೊಂದು ಭಾರಿ ಹಗರಣ ಆಗಿರುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.