ಶೇಖ ನಸ್ರೂ
ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದ ಓಲ್ಡ್ ಪೆನ್ಷನ್ ಮೊಹಲ್ಲಾದ ರಸ್ತೆಯ ಬದಿಯ ಶೆಡ್‌ನಲ್ಲಿ ಕಟ್ಟಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದಿದ್ದ ಆರೋಪಿ, ಬಿಹಾರದ ಚಂಪಾರಣ್ ಜಿಲ್ಲೆಯ ಶೇಖ್ ನಸ್ರು (30) ಎಂಬಾತನನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.
ಶನಿವಾರ ತಡರಾತ್ರಿ ಆರೋಪಿಯು ಹಸುಗಳ ಕೆಚ್ಚಲು ಕೊಯ್ದು, ಕಾಲಿಗೆ ಮಚ್ಚಿನಿಂದ ಹೊಡೆದು ಪರಾರಿ ಆಗಿದ್ದ.
ಹಸುಗಳ ಮಾಲೀಕ ಕರ್ಣ ಅವರು ನೀಡಿದ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಹರಿತವಾದ ಆಯುಧವನ್ನೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಭಾನುವಾರ ರಾತ್ರಿಯೇ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ಜನವರಿ 24ರ ವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಮೀಪದಲ್ಲೇ ಕೆಲಸ: ‘ಕೃತ್ಯ ಎಸಗಿದ ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಗೆ ಅಂಗಡಿಯಲ್ಲಿ ಸಹಾಯಕನಾಗಿ ಆರೋಪಿ ಕೆಲಸ ಮಾಡುತ್ತಿದ್ದ. ಮದ್ಯದ ನಶೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ಆರೋಪಿ ಕೃತ್ಯ ಎಸಗಿರುವುದು ಭಾನುವಾರ ಬೆಳಿಗ್ಗೆ ಗೊತ್ತಾಗಿದೆ. ಕೃತ್ಯ ಎಸಗಿದ ಕಿಡಿಗೇಡಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ದೃಶ್ಯಾವಳಿ ಆಧರಿಸಿ ಆರೋಪಿ ಸೆರೆ?: ‘ಕೆಲವು ವರ್ಷಗಳ ಹಿಂದೆ ಆರೋಪಿ ಶೇಖ್ ನಸ್ರು ನಗರಕ್ಕೆ ಬಂದಿದ್ದ. ಕೆಲವು ತಿಂಗಳ ಹಿಂದಷ್ಟೇ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಗೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಅದೇ ಮಾರ್ಗದಲ್ಲಿ ಪ್ರತಿನಿತ್ಯ ಅಂಗಡಿಗೆ ತೆರಳುತ್ತಿದ್ದ. ಶೆಡ್‌ನಲ್ಲಿ ಹಸುಗಳು ಇರುವುದನ್ನು ಗಮನಿಸಿದ್ದ. ಹೀಗಾಗಿ ಹಸುಗಳ ಮೇಲೆ ಕ್ರೌರ್ಯ ಎಸಗಿದ್ದಾನೆ. ಆರೋಪಿ ನಡೆದು ತೆರಳುತ್ತಿದ್ದ ಮಾರ್ಗದಲ್ಲಿ ಕೆಲವು ಸಿ.ಸಿ.ಟಿ.ವಿ. ಕ್ಯಾಮೆರಾಗಳಿದ್ದು, ಅದರಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯ ಎಸಗಿದ ಮೇಲೆ ಆರೋಪಿ ಸಮೀಪದಲ್ಲೇ ಇದ್ದ. ಅಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಮೂಲಗಳು ತಿಳಿಸಿವೆ.
ಹಸುಗಳಿಗೆ ಚಿಕಿತ್ಸೆ: ಹರಿತವಾದ ಆಯುಧದಿಂದ ಕೆಚ್ಚಲಿಗೆ ಹೊಡೆದ ಪರಿಣಾಮ ರಕ್ತ ಸೋರುತ್ತಿತ್ತು. ಪಶು ಆಸ್ಪತ್ರೆಯಲ್ಲಿ ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮೂರು ಹಸುಗಳೂ ಅಪಾಯದಿಂದ ಪಾರಾಗಿವೆ ಎಂದು ಮೂಲಗಳು ಹೇಳಿವೆ.
ಆರೋಪಿ ಒಬ್ಬನೇ ಕೃತ್ಯ ಎಸಗಿದ್ದಾನೆ ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರೆದಿದೆಗಿರೀಶ್ ಡಿಸಿಪಿ ಪಶ್ಚಿಮ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.