ADVERTISEMENT

ಉತ್ತರ ಕರ್ನಾಟಕದಲ್ಲಿ ತಯಾರಿಕೆ ಘಟಕ ಸ್ಥಾಪಿಸಿದರೆ ರಿಯಾಯಿತಿ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 14:37 IST
Last Updated 12 ಡಿಸೆಂಬರ್ 2025, 14:37 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಳಗಾವಿ (ಸುವರ್ಣ ವಿಧಾನಸೌಧ): ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಭಾಗದಲ್ಲಿ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಕಾರಿಡಾರ್‌ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ಏರೋಸ್ಪೇಸ್‌ ಬಿಡಿಭಾಗ ತಯಾರಿಕೆ ಘಟಕ ಸ್ಥಾಪಿಸಲು ಮುಂದೆ ಬಂದರೂ ಆಕರ್ಷಕ ರಿಯಾಯಿತಿ, ಪ್ರೋತ್ಸಾಹಕ ಕ್ರಮಕೈಗೊಳ್ಳಲಾಗುವುದು’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಅರವಿಂದ ಬೆಲ್ಲದ, ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ 1,777 ಎಕರೆ ಜಮೀನು ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು ಕೈಬಿಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿಯ ಲಭ್ಯತೆಯಿದ್ದು ಈ ಭಾಗದಲ್ಲಿ ಏರೋಸ್ಪೇಸ್‌ ಪಾರ್ಕ್ ಮಾಡಬೇಕು’ ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಭಾಗದಲ್ಲಿ ಉತ್ತಮ ಉದ್ಯಮ ಸ್ನೇಹಿ ವ್ಯವಸ್ಥೆ ಸೃಷ್ಟಿಯಾಗಿದೆ. ಬೆಂಗಳೂರು- ಮುಂಬೈ ಬ್ಯುಸಿನೆಸ್ ಕಾರಿಡಾರ್ ಅನ್ನು 3 ಸಾವಿರ ಎಕರೆ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಳಗಾವಿ ಭಾಗದಲ್ಲಿ ಜಾಗದ ಕೊರತೆಯಿದೆ. ವಿಶೇಷ ಡಿಫೆನ್ಸ್‌ ಕಾರಿಡಾರ್‌ ನಿರ್ಮಾಣಕ್ಕೆ 2014ರಿಂದ ಪ್ರಯತ್ನ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಎಲ್ಲರೂ ಒತ್ತಡ ಹಾಕಿ ಅನುಮೋದನೆ ಕೊಡಿಸಿದರೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಮಾಡಲು ಸಿದ್ಧ’ ಎಂದರು.

ADVERTISEMENT

‘ದೇವನಹಳ್ಳಿಯ ಏರೋಸ್ಪೇಸ್‌ ಪಾರ್ಕ್‌ಗೆ ಸಂಬಂಧಿಸಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಂಬಂಧಪಟ್ಟ ಕಂಪನಿಗಳಿಗೆ ವ್ಯವಸ್ಥೆ ಮಾಡುತ್ತೇವೆ. ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ 1,777.02 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ಕಲಂ 4ರಡಿ ಅಧಿಸೂಚನೆ ಹೊರಡಿಸಲಾಗಿದೆ. ಈ ಇಡೀ ಪ್ರದೇಶವನ್ನು ವಿಶೇಷ ಹಸಿರು ವಲಯವಾಗಿ ಘೋಷಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್‌ ಬಿಡಿಭಾಗಗಳ ತಯಾರಿಕಾ ಘಟಕಗಳಿಗೆ ಅಗತ್ಯ ಭೂಮಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಸಿದ್ಧವಿದ್ದೇವೆ. ಈ ಭಾಗದ ಯಾವುದೇ ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲು ಕಂಪನಿಗಳು ಮುಂದೆ ಬಂದರೆ, ವಿಶೇಷ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.