ADVERTISEMENT

ಚಿನ್ನ ಕಳ್ಳಸಾಗಣೆಗೆ ಆಫ್ರಿಕಾ ನಂಟು: ಇಂಟರ್‌ಪೋಲ್‌ನ ಮಾಹಿತಿ ಕೇಳಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:43 IST
Last Updated 26 ಏಪ್ರಿಲ್ 2025, 15:43 IST
<div class="paragraphs"><p>ಸಿಬಿಐ</p></div>

ಸಿಬಿಐ

   

ಬೆಂಗಳೂರು: ಜಾಂಬಿಯಾದಿಂದ ದುಬೈ ಮಾರ್ಗವಾಗಿ ಬೆಂಗಳೂರಿಗೆ 7 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಭಾರತೀಯನನ್ನು, ಜಾಂಬಿಯಾ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಿ ಎಂದು ಇಂಟರ್‌ಪೋಲ್‌ಗೆ ಸಿಬಿಐ ಪತ್ರ ಬರೆದಿದೆ.

‘ಜಾಂಬಿಯಾದ ರಾಜಧಾನಿ ಲೂಸಾಕದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಏಪ್ರಿಲ್‌ 19ರಂದು 27 ವರ್ಷದ ಭಾರತೀಯನನ್ನು ಅಲ್ಲಿನ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಭಾರತೀಯನಿಂದ ತಲಾ 1 ಕೆ.ಜಿ ತೂಕದ ಏಳು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ADVERTISEMENT

‘ಈ ವ್ಯಕ್ತಿ ಲೂಸಾಕದಿಂದ ದುಬೈಗೆ ವಿಮಾನಯಾನ ಟಿಕೆಟ್‌ ಖರೀದಿಸಿದ್ದು, ಅಲ್ಲಿಂದ ಬೆಂಗಳೂರಿಗೆ ಟಿಕೆಟ್‌ ಕಾಯ್ದಿರಿಸಿದ್ದ. ಈತನ ಹಿಂದೆ ದೊಡ್ಡ ಕಳ್ಳಸಾಗಣೆ ಜಾಲ ಇರುವ ಶಂಕೆ ಇದೆ. ಈ ಸಂಬಂಧ ಇಂಟರ್‌ಪೋಲ್‌ನ ನೆರವು ಕೇಳಲಾಗಿದೆ ಎಂದು ಜಾಂಬಿಯಾ ಕಸ್ಟಮ್ಸ್‌ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಜಾಂಬಿಯಾದಲ್ಲಿ ಬಂಧಿತನಾಗಿರುವ ಭಾರತೀಯ ವ್ಯಕ್ತಿ, ಆತನ ಮೂಲ ಮತ್ತು ವಿಮಾನ ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವಂತೆ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲಾಗಿದೆ. ಜಾಂಬಿಯಾ ಕಸ್ಟಮ್ಸ್‌ ಅಧಿಕಾರಿಗಳು ಆ ವ್ಯಕ್ತಿಯ ವಿವರಗಳನ್ನು ಈಗಾಗಲೇ ಇಂಟರ್‌ಪೋಲ್‌ ಜತೆಗೆ ಹಂಚಿಕೊಂಡಿದ್ದು, ಅವು ಶೀಘ್ರವೇ ಸಿಬಿಐ ಅಧಿಕಾರಿಗಳಿಗೆ ಲಭ್ಯವಾಗುವ ನಿರೀಕ್ಷೆ ಇದೆ’ ಎಂದು ಹೇಳಿವೆ.

‘ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಮತ್ತು ಮುಂಬೈನಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಚಿನ್ನವನ್ನು ಆಫ್ರಿಕಾದಿಂದ ದುಬೈಗೆ ಸಾಗಿಸಿ, ಅಲ್ಲಿಂದ ಭಾರತಕ್ಕೆ ತಂದಿರುವ ಮಾಹಿತಿ ಇದೆ. ಜಾಂಬಿಯಾದಲ್ಲಿ ದಾಖಲಾದ ಪ್ರಕರಣಕ್ಕೂ, ಈ ಪ್ರಕರಣಗಳಿಗೂ ಸಂಬಂಧ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ವಿವರಿಸಿವೆ.

ಇದೇ ಮಾರ್ಚ್‌ನಲ್ಲಿ ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳಸಾಗಣೆ ಮಾಡುವಾಗ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆವಿನ್ಯು ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿತ್ತು. ಫೆಬ್ರುವರಿ ಕೊನೆಯ ವಾರದಲ್ಲಿ ಅದೇ ರೀತಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಡಿಆರ್‌ಐ ಬಂಧಿಸಿತ್ತು. ಈ ಎರಡೂ ಪ್ರಕರಣದಲ್ಲಿ ತನಿಖೆಗೆ ನೆರವು ನೀಡುವಂತೆ ಡಿಆರ್‌ಐ, ಸಿಬಿಐಗೆ ಪತ್ರ ಬರೆದಿತ್ತು.

ಪ್ರಕರಣದ ದಾಖಲಿಸಿಕೊಂಡಿದ್ದ ಸಿಬಿಐ, ಕಳ್ಳಸಾಗಣೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕಸ್ಟಮ್ಸ್‌ ಅಧಿಕಾರಿಗಳ ಪಾತ್ರವಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಆರಂಭಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಮತ್ತು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ‘ಈ ಎರಡೂ ಪ್ರಕರಣಗಳಲ್ಲಿ ಆಫ್ರಿಕಾದಲ್ಲಿ ಚಿನ್ನ ಖರೀದಿಸಿ, ದುಬೈ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಸಾಧ್ಯತೆ ದಟ್ಟವಾಗಿದೆ’ ಎಂದು ಸಿಬಿಐ ಮೂಲಗಳು ಹೇಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.