ಧಾರವಾಡ ಕೃಷಿ ವಿಶ್ವವಿದ್ಯಾಲಯ
ಮೈಸೂರು: ರಾಜ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸಂಬಂಧ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕೃಷಿ ವಿಶ್ವವಿದ್ಯಾಲಯಗಳ ಸಮಗ್ರೀಕರಣ ಮತ್ತು ಪುನರ್ ಸಂಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲು ಶಿಫಾರಸು ಮಾಡಿದೆ.
ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸಾಧ್ಯತೆ ಕುರಿತು ಪರಿಶೀಲಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿ ಮೂರು ದಿನದ ಹಿಂದೆಯಷ್ಟೇ ವರದಿ ಸಲ್ಲಿಸಿದೆ.
ಮೊದಲ ಹಂತದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಕೃಷಿ ವಿಷಯಗಳನ್ನೊಳಗೊಂಡ ಕೃಷಿ–ತೋಟಗಾರಿಕೆ ವಿಶ್ವವಿದ್ಯಾಲಯಗಳನ್ನು ಜಿಲ್ಲಾವಾರು ವ್ಯಾಪ್ತಿಯೊಳಗೆ ‘ಆರು ಸಮಗ್ರ ಕೃಷಿ ವಿಶ್ವವಿದ್ಯಾಲಯ’ಗಳಾಗಿ ಸಂಯೋಜಿಸಲು ತಜ್ಞರು ಶಿಫಾರಸು ಮಾಡಿದ್ದಾರೆ.
ಎರಡನೇ ಹಂತದಲ್ಲಿ, ಭಾರತೀಯ ಪಶುವೈದ್ಯಕೀಯ ಮಂಡಳಿ (ವಿಸಿಐ) ಮಾನದಂಡಗಳ ಪ್ರಕಾರ, ಮೂಲಸೌಕರ್ಯ, ಬೋಧಕ ಸಿಬ್ಬಂದಿ ಒದಗಿಸಿದ ನಂತರ, ಪುನರ್ ರಚಿಸುವ ವಿಶ್ವವಿದ್ಯಾಲಯಗಳ ಜೊತೆಗೇ ಪಶುವೈದ್ಯಕೀಯ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಿಜ್ಞಾನ ಕಾಲೇಜುಗಳನ್ನು ಸಮಗ್ರೀಕರಿಸಬಹುದು ಎಂದು ಸಲಹೆ ಮಾಡಿದೆ.
ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯು ರಾಜ್ಯದಲ್ಲಿ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಲಿದೆ. ರೈತರಿಗೆ ಆಧುನಿಕ ಕೃಷಿ ಪದ್ಧತಿಯ ಸವಾಲುಗಳಿಗೂ ಇದರಿಂದ ಸಮಗ್ರ ಪರಿಹಾರ ಸಿಗಲಿದೆ. ಆಧುನಿಕ ಕೃಷಿಯಲ್ಲಿ ರೈತರ ಆದಾಯ ಸುಧಾರಿಸಲು ಮತ್ತು ವೆಚ್ಚ ತಗ್ಗಿಸಲು ಒಂದೇ ಸ್ಥಳದಲ್ಲಿ ಬಹು-ವಿಷಯಗಳ ಪರಿಣತಿ ಒದಗಿಸುವ ಅಗತ್ಯವಿದೆ ಎಂದು ತಜ್ಞರ ಸಮಿತಿ ಪ್ರತಿಪಾದಿಸಿದೆ.
ತಜ್ಞರ ಸಮಿತಿ ಈ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ರಾಜ್ಯದ ಎಲ್ಲ ಕೃಷಿ ವಿ.ವಿ.ಗಳು, 18 ಮಹಾವಿದ್ಯಾಲಯಗಳು, 16 ಕೃಷಿ ಸಂಶೋಧನಾ ಕೇಂದ್ರಗಳು, 11 ಕೃಷಿ ವಿಜ್ಞಾನ ಕೇಂದ್ರಗಳಿಗೆ (ಕೆವಿಕೆ) ಭೇಟಿ ನೀಡಿ, 2600ಕ್ಕೂ ಹೆಚ್ಚು ವಿದ್ಯಾರ್ಥಿಗಳು, 900 ಅಧ್ಯಾಪಕರು, 350 ರೈತರು, 38 ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತ್ತು. ಕುಲಪತಿಗಳು, ವಿಶ್ರಾಂತ ಕುಲಪತಿಗಳು, ಇಲಾಖಾ ಕಾರ್ಯದರ್ಶಿಗಳೊಂದಿಗೂ ಚರ್ಚಿಸಿತ್ತು.
ಪ್ರಮುಖ ಶಿಫಾರಸುಗಳು
ಪ್ರತಿ ಸಮಗ್ರ ವಿಶ್ವವಿದ್ಯಾಲಯದಲ್ಲಿ ವಿಶೇಷ ತೋಟಗಾರಿಕೆ ವಿಭಾಗಗಳನ್ನು ರಚಿಸಬೇಕು
ಬೆಳೆ, ನಿರ್ದಿಷ್ಟ-ವಿಷಯ ಸಂಶೋಧನೆಗೆ ಸಂಶೋಧನಾ ಕೇಂದ್ರ ಸ್ಥಾಪಿಸಿ
ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣಾ ಘಟಕಗಳನ್ನು ಬಹು ವಿಷಯಗಳ ರೈತ ತರಬೇತಿ ಕೇಂದ್ರಗಳನ್ನಾಗಿಸಬೇಕು
ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆಗಳ ಜಂಟಿ ಮೇಲ್ವಿಚಾರಣೆಯಲ್ಲಿ ಸಮನ್ವಯ ಬಲಪಡಿಸಬೇಕು
ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಕೃಷಿ–ತೋಟಗಾರಿಕೆ ವಿಶ್ವವಿದ್ಯಾಲಯಗಳು ಒಟ್ಟಿಗೆ ಇವೆ. ನಮ್ಮಲ್ಲೂ ಒಂದೇ ಸೂರಿನಡಿ ತರಲು ಹೇಳಿದ್ದೇವೆ. ಇದರಿಂದ ಸರ್ಕಾರ, ರೈತರು, ವಿದ್ಯಾರ್ಥಿಗಳಿಗೆ ಅನುಕೂಲ.ಟಿ.ಎಂ. ವಿಜಯ ಭಾಸ್ಕರ್, ತಜ್ಞರ ಸಮಿತಿ ಅಧ್ಯಕ್ಷ
ದೇಶದಲ್ಲಿ ಭೂ ಹಿಡುವಳಿ ಕಡಿಮೆ ಇದೆ. ಏಕ ಬೆಳೆ ನಂಬಲಾಗದು. ಸಮಗ್ರ ಕೃಷಿ ಅನಿವಾರ್ಯವಾಗಿದೆ. ರೈತರಿಗೆ ಒಂದೇ ಸೂರಿನಡಿ ಸಮಗ್ರ ಮಾಹಿತಿ ಕಲ್ಪಿಸಲು ಅಂಥ ವಿಶ್ವವಿದ್ಯಾಲಯಗಳು ಇರಬೇಕು.ಎಸ್.ವಿ. ಸುರೇಶ್, ಸಮಿತಿ ಸಂಚಾಲಕ, ಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.