ADVERTISEMENT

ಮಾರ್ಚ್‌ 1 ರಿಂದ 31ರವರೆಗೆ ಆಗುಂಬೆ ಘಾಟಿಯಲ್ಲಿ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:15 IST
Last Updated 23 ಫೆಬ್ರುವರಿ 2019, 20:15 IST

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಕಾರಣ ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಲಘು ವಾಹನಗಳಾದ ಸಾಮಾನ್ಯ ಬಸ್ಸು, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ತೀರ್ಥಹಳ್ಳಿ–ಕೊಪ್ಪ–ಶೃಂಗೇರಿ-ಮಾಳಾಘಾಟ್‌–ಕಾರ್ಕಳ–ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚರಿಸಬೇಕು. ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಷುರಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳು ತೀರ್ಥಹಳ್ಳಿ–ಮಾಸ್ತಿಕಟ್ಟೆ–ಹೊಸಂಗಡಿ–ಸಿದ್ದಾಪುರ–ಕುಂದಾಪುರ–ಉಡುಪಿ (ರಾಜ್ಯ ಹೆದ್ದಾರಿ 52) ಮೂಲಕ ಸಂಚರಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ನಿಷೇಧ ಮಾರ್ಚ್ 1ರಿಂದ 31ರವರೆಗೆ ಅಥವಾ ಕಾಮಗಾರಿ ಮುಗಿಯುವ ತನಕ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುವುದು. ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ADVERTISEMENT

ಜುಲೈ 10 ಮತ್ತು 13ರಂದು ಸುರಿದ ಭಾರಿ ಮಳೆಯಿಂದಾಗಿ ಆಗುಂಬೆ ಘಾಟಿಯ 7ನೇ ಮತ್ತು 14ನೇ ತಿರುವಿನಲ್ಲಿ ಮತ್ತು ಆನೆಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿ ಭಾಗಶಃ ರಸ್ತೆ ಕುಸಿದಿದೆ. ಶಾಶ್ವತ ದುರಸ್ತಿ ಕಾಮಗಾರಿಯನ್ನು ಇದೀಗ ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.