
ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ಮನೆಯಲ್ಲಿ ಮತದಾರರ ಪಟ್ಟಿಯನ್ನು ಸುಟ್ಟು ಹಾಕಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯರು ಅಕ್ಟೋಬರ್ 17ರಂದು ಕಲಬುರಗಿಯಲ್ಲಿ ದಾಳಿ ನಡೆಸಿದ ಹೊತ್ತಿನಲ್ಲೇ, ಆಳಂದದಲ್ಲಿರುವ ಸುಭಾಷ ಗುತ್ತೇದಾರ ಅವರ ಮನೆಯ ಮುಂದೆ ರಾಶಿಗಟ್ಟಲೆ ಕಾಗದ ಪತ್ರಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಮಿನಿಟ್ರಕ್ ಒಂದರಲ್ಲಿ, ಅರೆಬರೆ ಸುಟ್ಟ ಕಾಗದ ಪತ್ರಗಳನ್ನು ಸಾಗಿಸಿ ಅಮರ್ಜಾ ನದಿಗೆ ಎಸೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ ಗುತ್ತೇದಾರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಸಿ.ಸಿ.ಟಿ.ವಿ ದೃಶ್ಯಾವಳಿಗಳ ವಿವರಗಳನ್ನು ಎಸ್‌ಐಟಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಇರಿಸಿದೆ.
ಸುಭಾಷ ಅವರ ಆಳಂದದ ಮನೆಯಲ್ಲಿ ಪರಿಶೀಲನೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಅಲ್ಲಿಂದ ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದರು. ಅದರಲ್ಲಿ ಆಳಂದ ಮನೆಯ ಹೊರಗೆ ಮತ್ತು ಒಳಗಡೆ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳೂ ಇದ್ದವು. ದೃಶ್ಯಾವಳಿ ಇದ್ದ ಡಿವಿಆರ್ ಪರಿಶೀಲನೆಯ ನಂತರ ಹಲವು ಸುಳಿವುಗಳು ಲಭ್ಯವಾಗಿವೆ ಎಂದು ಮೂಲಗಳು ಹೇಳಿವೆ.
ಡಿವಿಆರ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಪ್ರಾಥಮಿಕ ಪರಿಶೀಲನೆ ವೇಳೆ ಸುಭಾಷ ಗುತ್ತೇದಾರ ಅವರ ಆಪ್ತ ಉದ್ಯಮಿಯೊಬ್ಬರು, ಆಳಂದದ ಮನೆಯಲ್ಲಿ ಕಾಗದಪತ್ರಗಳನ್ನು ಎತ್ತಿ ಸುರಿಯುತ್ತಿರುವುದು ಗೊತ್ತಾಗಿದೆ. ಅದೇ ಕಾಗದ ಪತ್ರಗಳಿಗೆ ಮನೆಯ ಹೊರಗೆ ಬೆಂಕಿ ಹಚ್ಚಲಾಗಿದೆ. ಆ ಕಾಗದ ಪತ್ರಗಳು ಮತದಾರರ ಚೀಟಿ ಎಂಬುದು ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂದು ಖಚಿತಪಡಿಸಿವೆ.
ದೃಶ್ಯಾವಳಿಯಲ್ಲಿ ಇರುವ ವ್ಯಕ್ತಿಯನ್ನು ಗುರುತಿಸಲಾಗಿದೆ. ಆ ವ್ಯಕ್ತಿಯು ಸ್ಥಳೀಯ ಗುತ್ತಿಗೆದಾರ ಆಗಿದ್ದು, ಆಳಂದ ಕ್ಷೇತ್ರದ ಹಲವು ಸಿವಿಲ್ ಕಾಮಗಾರಿಗಳನ್ನು ನಡೆಸಿದ್ದಾರೆ. ಅವರ ಬ್ಯಾಂಕ್ ವಹಿವಾಟು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಎಸ್‌ಐಟಿ ತನಿಖಾಧಿಕಾರಿಗಳು ಡಿವಿಆರ್‌ನ ವಿಧಿವಿಜ್ಞಾನ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಮಾಹಿತಿ ನೀಡಿವೆ.
ಅಮರ್ಜಾ ನದಿಯಲ್ಲಿ ಎಸೆಯಲಾಗಿದ್ದ ಅರೆಬರೆ ಸುಟ್ಟ ಕಾಗದ ಪತ್ರಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ ಮತದಾರರ ಪಟ್ಟಿಗಳು, ಮತದಾರರ ಚೀಟಿಗಳು, ಮತದಾರರ ನೋಂದಣಿಯ ವಿವಿಧ ಅರ್ಜಿಗಳ ಪ್ರತಿಗಳು ಪತ್ತೆಯಾಗಿವೆ. ಆಳಂದ ಕ್ಷೇತ್ರದಲ್ಲಿ ಅಕ್ರಮವಾಗಿ ರದ್ದುಪಡಿಸಲು ಯತ್ನಿಸಲಾಗಿದ್ದ 5,994 ಮತದಾರರ ಚೀಟಿಗಳಿಗೂ, ಈ ಅರ್ಜಿಗಳಿಗೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದಿವೆ.
‘ಶೀಘ್ರವೇ ವಿಚಾರಣೆ’: ‘ಸುಭಾಷ ಗುತ್ತೇದಾರ ಅವರಿಗೆ ನ್ಯಾಯಾಲಯವು ನಿರೀಕ್ಷಣ ಜಾಮೀನು ನೀಡಿದ್ದರೂ, ವಿಚಾರಣೆಗೆ ಹಾಜರಾಗಬೇಕು ಮತ್ತು ತಮ್ಮ ಇರುವಿಕೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಷರತ್ತು ಹಾಕಿದೆ. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಲೇಬೇಕಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.