ADVERTISEMENT

ದೇಶಿ ತಯಾರಿಕೆ ಮದ್ಯ ಮತ್ತಷ್ಟು ದುಬಾರಿ: ಸುಂಕ ಪರಿಷ್ಕರಣೆ ಮುಂದಾದ ರಾಜ್ಯ ಸರ್ಕಾರ

ತೆರಿಗೆ ದರ, ಸ್ಲ್ಯಾಬ್‌ನಲ್ಲಿ ಸಮಗ್ರ ಪರಿಷ್ಕರಣೆ l ಪ್ರೀಮಿಯಂ ಗುಣಮಟ್ಟದ ಮದ್ಯದ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 23:15 IST
Last Updated 1 ಮೇ 2025, 23:15 IST
<div class="paragraphs"><p>ಮದ್ಯ</p></div>

ಮದ್ಯ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಅಗ್ಗದ ದರದಲ್ಲಿ ಸಿಗುತ್ತಿದ್ದ ಭಾರತೀಯ ಮದ್ಯಗಳ (ಐಎಂಎಲ್‌) ಬೆಲೆ, ರಾಜ್ಯದಲ್ಲಿ ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿದೆ.

ADVERTISEMENT

ಬ್ರ್ಯಾಂಡಿ, ವಿಸ್ಕಿ, ಜಿನ್‌, ರಮ್‌ನಂತಹ ಐಎಂಎಲ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ವೇಳೆ ದುಬಾರಿ ಮತ್ತು ಪ್ರೀಮಿಯಂ ಐಎಂಎಲ್‌ ಮೇಲಿನ ಸುಂಕ ಗಣನೀಯವಾಗಿ ಕಡಿಮೆಯಾಗಲಿದೆ. 

ಮದ್ಯದ ಮೇಲಿನ ಸುಂಕ ಪರಿಷ್ಕರಣೆ ಮತ್ತೆ ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆಗಾಗಿ ಹಣಕಾಸು ಇಲಾಖೆಯು, ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (ಎರಡನೇ ತಿದ್ದುಪಡಿ) ನಿಯಮಗಳು–2025ರ ಕರಡನ್ನು ಹೊರಡಿಸಿದೆ. ಐಎಂಎಲ್‌ನ ತೆರಿಗೆ ಸ್ಲ್ಯಾಬ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ.

ಗರಿಷ್ಠ ₹449ರಷ್ಟು ಘೋಷಿತ ಮೂಲ ಬೆಲೆ ಇದ್ದ ಐಎಂಎಲ್‌ನ ಪ್ರತಿ ಬಲ್ಕ್‌ ಲೀಟರ್‌ ಮೇಲೆ ಈಗ ₹215 ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಕರಡು ನಿಯಮದಲ್ಲಿ ಈ ತೆರಿಗೆ ಸ್ಲ್ಯಾಬ್‌ ರದ್ದುಪಡಿಸಿ, ₹470ರಷ್ಟು ಘೋಷಿತ ಮೂಲ ಬೆಲೆಯ ಹೊಸ ತೆರಿಗೆ ಸ್ಲ್ಯಾಬ್‌ ರೂಪಿಸಲಾಗಿದೆ. ಇದಕ್ಕೆ ₹297 ಅಬಕಾರಿ ಸುಂಕ ವಿಧಿಸಲಾಗಿದೆ. ಈ ಸ್ಲ್ಯಾಬ್‌ನ ಮದ್ಯದ ಮೇಲೆ ವಿಧಿಸುತ್ತಿದ್ದ ಸುಂಕದಲ್ಲಿ ₹82 ಹೆಚ್ಚಿಸಿದಂತಾಗುತ್ತದೆ.

‘2025–26ರ ಆರ್ಥಿಕ ವರ್ಷದಲ್ಲಿ ₹40,000 ಕೋಟಿಯಷ್ಟು ಅಬಕಾರಿ ಸುಂಕ ಮೂಲದ ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಹೀಗಾಗಿ, ಅತಿ ಹೆಚ್ಚು ಮಾರಾಟವಾಗುವ ಅಗ್ಗದ ಬೆಲೆಯ ಐಎಂಎಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. 180 ಎಂಎಲ್‌ನ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ₹15ರಿಂದ ₹25ರವರೆಗೂ ಏರಿಕೆಯಾಗಲಿದೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರವೇಶ ಮಟ್ಟದ ಸ್ಲ್ಯಾಬ್‌ನಲ್ಲಿ ಬರುವ ಐಎಂಎಲ್‌ ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗುತ್ತದೆ. ಹೀಗಾಗಿ ಅವುಗಳ ಮೇಲಿನ ಸುಂಕವನ್ನೇ ಹೆಚ್ಚಳ ಮಾಡಲಾಗಿದೆ. ಪರಿಣಾಮವಾಗಿ, ಈ ಸ್ಲ್ಯಾಬ್‌ನ ಮದ್ಯದಿಂದಲೇ ₹1,500 ಕೋಟಿಯಿಂದ ₹2,000 ಕೋಟಿಯಷ್ಟು ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಅಧಿಕಾರಿ ವಿವರಿಸಿದರು.

ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಐಎಂಎಲ್‌ಗಳಲ್ಲಿ ಒಟ್ಟು 18 ತೆರಿಗೆ ಸ್ಲ್ಯಾಬ್‌ಗಳಿವೆ. ಕರಡು ನಿಯಮಗಳಲ್ಲಿ ಈ ಸ್ಲ್ಯಾಬ್‌ಗಳನ್ನು 16ಕ್ಕೆ ಇಳಿಸಲಾಗಿದೆ. ಪ್ರತಿ ಸ್ಲ್ಯಾಬ್‌ನ ಕನಿಷ್ಠ ಮತ್ತು ಗರಿಷ್ಠ ಬೆಲೆಯನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಕಡಿಮೆ ಸುಂಕದ ಸ್ಲ್ಯಾಬ್‌ನ ವ್ಯಾಪ್ತಿಯಲ್ಲಿದ್ದ ಹಲವು ಮದ್ಯದ ಬ್ರ್ಯಾಂಡ್‌ಗಳು, ಹೆಚ್ಚು ಸುಂಕದ ಸ್ಲ್ಯಾಬ್‌ನ ವ್ಯಾಪ್ತಿಗೆ ಬರಲಿವೆ. ಜತೆಗೆ ಕೆಲವು ಮದ್ಯಗಳು ಹೆಚ್ಚು ಸುಂಕದ ಸ್ಲ್ಯಾಬ್‌ನಿಂದ, ಕಡಿಮೆ ಸುಂಕದ ಸ್ಲ್ಯಾಬ್‌ಗೆ ಬರಲಿವೆ.

ಪ್ರೀಮಿಯಂ ಮದ್ಯದ ಮೇಲಿನ ಅಬಕಾರಿ ಸುಂಕ ಸ್ಲ್ಯಾಬ್‌ ಮತ್ತು ಸುಂಕದ ಮೊತ್ತವನ್ನು ಪೂರ್ಣ ಬದಲಾಯಿಸಲಾಗಿದೆ.

ಬಿಯರ್‌ ತುಟ್ಟಿ?
ಎಲ್ಲ ಸ್ವರೂಪದ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. 2023ರ ನಂತರ ಬಿಯರ್‌ ಬೆಲೆ ಈಗಾಗಲೇ ಮೂರು ಬಾರಿ ಹೆಚ್ಚಳವಾಗಿದೆ.ಪ್ರತಿ ಬಾಟಲಿ ಬಿಯರ್‌ನ ಚಿಲ್ಲರೆ ಮಾರಾಟ ಬೆಲೆಯಲ್ಲಿ ₹15ರಿಂದ ₹25ರಷ್ಟು ಹೆಚ್ಚಾಗಬಹುದು.

ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ₹15,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಬೆಲೆ, ಅತ್ಯಂತ ಗರಿಷ್ಠ ಮಟ್ಟದ ಸ್ಲ್ಯಾಬ್‌ ಆಗಿತ್ತು. ಈ ಸ್ಲ್ಯಾಬ್‌ನ ಮದ್ಯದ, ಪ್ರತಿ ಬಲ್ಕ್‌ ಲೀಟರ್‌ನ ಮೇಲೆ ₹5,358 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತಿತ್ತು. ಕರಡು ನಿಯಮಗಳಲ್ಲಿ ಈ ಸ್ಲ್ಯಾಬ್‌ ಅನ್ನು ₹15,001ರಿಂದ ₹20,000ರದವರೆಗೆ ಎಂದು ಪರಿಷ್ಕರಿಸಲಾಗಿದೆ. ಇದರ ಮೇಲಿನ ಅಬಕಾರಿ ಸುಂಕವನ್ನು ₹2,800ಕ್ಕೆ ಇಳಿಸಲಾಗಿದೆ.

₹20,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಬೆಲೆಯ ಹೊಸ ಸ್ಲ್ಯಾಬ್‌ ಅನ್ನು ರೂಪಿಸಿದ್ದು, ಅದರ ಪ್ರತಿ ಬಲ್ಕ್‌ ಲೀಟರ್‌ ಮೇಲೆ ₹3,000 ಹೆಚ್ಚುವರಿ ಅಬಕಾರಿ ಸುಂಕ ನಿಗದಿ ಮಾಡಲಾಗಿದೆ. ಹೀಗಾಗಿ ಪ್ರೀಮಿಯಂ ಮತ್ತು ದುಬಾರಿ ಮದ್ಯಗಳ ಚಿಲ್ಲರೆ ಮಾರಾಟ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.