ಆರ್.ವಿ.ದೇಶಪಾಂಡೆ
ಕಾರವಾರ: 'ಕಾಂಗ್ರೆಸ್ ಶಾಸಕರೆಲ್ಲ ಒಟ್ಟಾಗಿದ್ದೇವೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅವರನ್ನು ಬದಲಿಸಬೇಕೆಂಬ ವಿಚಾರ ಈವರೆಗೂ ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿಲ್ಲ' ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
'ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬುದು ವಿರೋಧ ಪಕ್ಷಗಳು ಹೇಳುತ್ತಿವೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಈ ರೀತಿಯ ಹೇಳಿಕೆ ಕೊಡುತ್ತಾರೆ. ಅವರಿಗೆ ಅವರ ಕುರ್ಚಿ ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುವುದು ಅನಿವಾರ್ಯ' ಎಂದು ವ್ಯಂಗ್ಯವಾಗಿ ಹೇಳಿದರು.
'ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಕೆಲವು ಶಾಸಕರಿಗೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ. ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರಬಹುದು. ಅವುಗಳನ್ನೆಲ್ಲ ಮಾಧ್ಯಮದ ಎದುರು ಹೇಳಿಕೊಳ್ಳುವುದು ಸರಿಯಲ್ಲ' ಎಂದು ಇಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
'ಸಿದ್ದರಾಮಯ್ಯ ಸರ್ಕಾರಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ. ಶಾಸಕರ ಸಮಸ್ಯೆ ಬಗ್ಗೆ ಸುರ್ಜೆವಾಲಾ ಸಭೆ ನಡೆಸಿ ಅಹವಾಲು ಆಲಿಸುತ್ತಾರೆ. ಮಾತನಾಡಿ ಸಮಸ್ಯೆ ಸರಿಪಡಿಸುತ್ತಾರೆ' ಎಂದರು.
'ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಒಳ್ಳೆ ವ್ಯಕ್ತಿ. ಅವರಿಗೆ ಅಧ್ಯಕ್ಷ ಸ್ಥಾನ ಸಿಗುತ್ತದೆಯೊ ಇಲ್ಲವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.