ADVERTISEMENT

ಜೂನ್‌ 8ರಿಂದ ಮೃಗಾಲಯ ವೀಕ್ಷಣೆ, ಸಫಾರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 14:52 IST
Last Updated 6 ಜೂನ್ 2020, 14:52 IST
ಮೈಸೂರು ಮೃಗಾಲಯದ ಸಂಗ್ರಹ ಚಿತ್ರ
ಮೈಸೂರು ಮೃಗಾಲಯದ ಸಂಗ್ರಹ ಚಿತ್ರ    

ಮೈಸೂರು: ರಾಜ್ಯದಲ್ಲಿನ ಮೃಗಾಲಯ, ಜೈವಿಕ ಉದ್ಯಾನ, ಪಕ್ಷಿಧಾಮ ಹಾಗೂ ರಾಷ್ಟ್ರೀಯ ಉದ್ಯಾನಗಳನ್ನು ಸಾರ್ವಜನಿಕರ ವೀಕ್ಷಣೆಗೆ ಜೂನ್‌ 8ರಿಂದ ತೆರೆಯಲಾಗುತ್ತಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೀಗಾಗಿ, ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರ ಸ್ವಾಗತಕ್ಕೆ ಸಿದ್ಧತೆ ನಡೆದಿದ್ದು, ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿಗೂ ಅವಕಾಶ ಸಿಗಲಿದೆ.

ಪ್ರವಾಸಿಗರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ಮಾಸ್ಕ್‌ ಧರಿಸಿರುವುದು ಕಡ್ಡಾಯ. 1 ಮೀಟರ್‌ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಫಾರಿ ವಾಹನಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ. ಪ್ರತಿ ದಿನ ವಾಹನಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪ್ರಾಣಿಗಳಿಂದಲೂ 1 ಮೀಟರ್‌ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

ADVERTISEMENT

ಮಾರ್ಗಸೂಚಿ ಪಾಲನೆ ಆಗುತ್ತಿದೆಯೇ ಎಂಬುದನ್ನು ಪ‍ರಿಶೀಲಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಪ್ರವೇಶದ್ವಾರದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕು. ಜೊತೆಗೆ ಸೋಪು ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ದಟ್ಟಣೆ ತಪ್ಪಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಬೇಕು.

‘ಸೋಮವಾರದಿಂದಲೇ ರಾಜ್ಯದ ಎಲ್ಲಾ ಮೃಗಾಲಯಗಳನ್ನು ತೆರೆಯಲಾಗುವುದು. ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿಗಳ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.

ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್‌ 15ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.