ADVERTISEMENT

ಪುಸ್ತಕ ಮಾರಿದ ಹಣ ನೆರೆ ಸಂತ್ರಸ್ತ ಮಕ್ಕಳಿಗೆ: ಕವಿ ಗಿರಿರಾಜ್‌ರಿಂದ ಮಾದರಿ ಕಾರ್ಯ

ಕವಿ ಅಲ್ಲಾ ಗಿರಿರಾಜ್‌ ಮಾದರಿ ಕಾರ್ಯ: ವಿತರಣೆ ನಾಳೆ

ಎಂ.ಮಹೇಶ
Published 23 ಜನವರಿ 2020, 21:35 IST
Last Updated 23 ಜನವರಿ 2020, 21:35 IST
ಅಲ್ಲಾ ಗಿರಿರಾಜ್‌
ಅಲ್ಲಾ ಗಿರಿರಾಜ್‌   

ಬೆಳಗಾವಿ: ಮಾನವೀಯ ಮೌಲ್ಯ ಮತ್ತು ಸಂಬಂಧಗಳ ಮಹತ್ವ ಸಾರುವ ಗಜಲ್‌ಗಳಿಂದಾಗಿ ಹೆಸರು ಗಳಿಸಿರುವ ಕೊ‍ಪ್ಪಳ ಜಿಲ್ಲೆ ಕನಕಗಿರಿಯ ಕವಿ ಅಲ್ಲಾ ಗಿರಿರಾಜ್‌ ತಮ್ಮ ‘ಸಂದಲ್‌ ಗಜಲ್‌’ ಪುಸ್ತಕ ಮಾರಾಟದಿಂದ ಬಂದ ಹಣವನ್ನು, ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್‌ಬುಕ್‌ಗಳ ವಿತರಣೆಗೆ ವಿನಿಯೋಗಿಸಿದ್ದಾರೆ.

ತಮ್ಮ ಕೃತಿಯು ಸಮಾಜದಿಂದ ತಂದುಕೊಟ್ಟ ಹಣವನ್ನು ಮರಳಿಸುವ ಮಾದರಿ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ಜಿಲ್ಲೆಯ ರಾಯಬಾಗ ತಾಲ್ಲೂಕು ದಿಗ್ಗೇವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಳೇ ದಿಗ್ಗೇವಾಡಿ ಹಾಗೂ ಹೊಸ ದಿಗ್ಗೇವಾಡಿ ಸರ್ಕಾರಿ ಶಾಲೆಗಳ 76 ಮಕ್ಕಳಿಗೆ ಜ.24ರಂದು ಬೆಳಿಗ್ಗೆ 11ಕ್ಕೆ ಸಮವಸ್ತ್ರ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸುತ್ತಿದ್ದಾರೆ.

ಗಿರಿರಾಜ್‌ ಅವರ ಮತ್ತೊಂದು ಪುಸ್ತಕ ‘ಫಕೀರ್‌ ಗಜಲ್‌’ ಅಲ್ಲೇ ಬಿಡುಗಡೆ ಆಗಲಿದೆ. ಹೀಗೆ, ಕವಿಯೊಬ್ಬರು ತಮ್ಮ ಕೃತಿಯ ಹಣವನ್ನು ನೆರೆ ಸಂತ್ರಸ್ತ ಮಕ್ಕಳಿಗೆ ನೀಡಿ ಅವರ ನಡುವೆಯೇ ಮತ್ತೊಂದು ಪುಸ್ತಕ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಮಕ್ಕಳೇ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ADVERTISEMENT

ಅದಕ್ಕಾಗೇ ಪ್ರಕಟಿಸಿದೆ:‘20 ವರ್ಷಗಳಿಂದಲೂ ಆದಿವಾಸಿ, ಅನಾಥರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ‍ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಯಾವ ರೀತಿ ನೆರವಾಗಬಹುದು ಎಂದು ಯೋಚಿಸಿದಾಗ ಬಂದ ಐಡಿಯಾದಂತೆ ಈ ಕಾರ್ಯಕ್ರಮ ನಡೆಯುತ್ತಿದೆ’ ಎಂದು ಅಲ್ಲಾ ಗಿರಿರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂದಲ್‌ ಗಜಲ್‌’ ನನ್ನ 17ನೇ ಹಾಗೂ ಗಜಲ್‌ನ 7ನೇ ಕೃತಿಯಾಗಿದೆ. ನನ್ನ ಹಣದಲ್ಲೇ ಆ ಪುಸ್ತಕ ಪ್ರಕಟಿಸಿದ್ದೆ. ಈವರೆಗೆ 600ಕ್ಕೂ ಹೆಚ್ಚಿನ ಪುಸ್ತಕಗಳು ಮಾರಾಟವಾಗಿವೆ. ಅದರಿಂದ ಸದ್ಯ ₹ 56ಸಾವಿರ ಸಂಗ್ರಹವಾಗಿದೆ. ವಿವಿಧೆಡೆ ಕಾರ್ಯಕ್ರಮ ಆಯೋಜನೆ ಮೊದಲಾದವುಗಳಿಗೆ ಆದ ವೆಚ್ಚ ತೆಗೆದು ₹ 40ಸಾವಿರವನ್ನು ನೆರೆ ಸಂತ್ರಸ್ತ ಮಕ್ಕಳಿಗೆ ವಿನಿಯೋಗಿಸುತ್ತಿದ್ದೇನೆ. ದೇಶದಲ್ಲೇ ವಿಶೇಷ ಪ್ರಯೋಗವಿದು ಎನ್ನಬಹುದಾಗಿದೆ. ರಾಯಬಾಗದ ಗೆಳೆಯರ ಸಹಯೋಗದಲ್ಲಿ ಆಯೋಜಿಸಲಾಗಿದೆ. ಶಾಲೆಯವರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

‘ಆಡಳಿತ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷದವರೂ ನೆರೆಪೀಡಿತ ಪ್ರದೇಶದಲ್ಲೂ ‘ನಮ್ಮ ಪಕ್ಷದವರು ಯಾರು’ ಎನ್ನುವುದನ್ನು ನೋಡಿದರು. ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡಲಿಲ್ಲ. ಹೀಗಾಗಿ, ಸಮಾನ ಮನಸ್ಕ ಗೆಳೆಯರು ಅವರಿಗೆ ನೆರವಾಗುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಅಲ್ಲಾ ಗಿರಿರಾಜ್ ಸಾರ್ಥಕ ಮತ್ತು ಮಾನವೀಯ ಕೆಲಸಕ್ಕೆ ಮುಂದಾಗಿದ್ದಾರೆ. ಕವಿಯ ಸಾರ್ಥಕತೆ ಎಂದರೆ ಇದೇ ಇರಬೇಕು. ನಮ್ಮೆಲ್ಲರಿಗೂ ಮಾದರಿಯಾದ ನಡೆಯನ್ನು ತೋರಿಸಿ ಕೊಡುತ್ತಿದ್ದಾರೆ. ಇದೊಂದು ಅಪರೂಪದ ಕಾರ್ಯಕ್ರಮ’ ಎನ್ನುತ್ತಾರೆ ಶಿಕ್ಷಕರೂ ಆದ ಯುವ ಕವಿ ವೀರಣ್ಣ ಮಡಿವಾಳರ.

*
ಸಮಾಜಕ್ಕೆ ನನ್ನದೊಂದು ಅಳಿಲು ಸೇವೆ ಇದಾಗಿದೆ. ಪುಸ್ತಕದಿಂದ ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ಹಣವನ್ನು ನೆರೆ ಸಂತ್ರಸ್ತ ಇನ್ನೊಂದು ಸರ್ಕಾರಿ ಶಾಲೆಯ ಮಕ್ಕಳಿಗೆ ವಿನಿಯೋಗಿಸಲು ಉದ್ದೇಶಿಸಿದ್ದೇನೆ.
–ಅಲ್ಲಾ ಗಿರಿರಾಜ್‌, ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.