ADVERTISEMENT

ಹೆಬ್ಬಾಳ್ಕಕರಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ: CT ರವಿ ವಿರುದ್ಧ ಸಭಾಪತಿಗೆ ದೂರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 8:56 IST
Last Updated 19 ಡಿಸೆಂಬರ್ 2024, 8:56 IST
   

ಸುವರ್ಣ ವಿಧಾನಸೌಧ (ಬೆಳಗಾವಿ): ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ ಕುರಿತು ಬಿಜೆಪಿಯ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.

‘ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ. ಈ ವಿಷಯದ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಎಲ್ಲ ಸದಸ್ಯರು ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ಪಟ್ಟು ಹಿಡಿದರು. ಪ್ರತಿಯಾಗಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಸೇರಿದಂತೆ ಬಿಜೆಪಿ ಸದಸ್ಯರು ಕೂಡಾ ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ‘ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌’ ಎಂದು ಘೋಷಣೆ ಕೂಗಿದರು. ಸದನದಲ್ಲಿ ಕೋಲಾಹಲ ಉಂಟಾದಾಗ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು.

ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಸದನದ ಒಳಗೆ ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿದರು. ಈ ಗದ್ದಲದ ಮಧ್ಯೆ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರು ಸಭಾಪತಿಗೆ ದೂರು ನೀಡಿದರು. ದೂರು ಸ್ವೀಕರಿಸಿದ ಸಭಾಪತಿ, ಆಡಿಯೊ ವಿಡಿಯೊ ಪರಿಶೀಲನೆಗೆ ಸೂಚನೆ ನೀಡಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ ಸಿ.ಟಿ ರವಿ, ‘ಲಕ್ಷ್ಮೀ ಹೆಬ್ಬಾಳ್ಕರಗೆ ನಾನು ಆಕ್ಷೇಪಾರ್ಹ ಪದ ಬಳಸಿಲ್ಲ. ನಾನು ಪದ ಬಳಸಿದ ದಾಖಲೆ ಇದ್ದರೇ ತೆಗೆಯಿರಿ. ನಾನು ಆ ರೀತಿಯ ಪದ ಬಳಸಿಲ್ಲ. ನಾನು ಕಪೋಲ ಕಲ್ಪಿತ ಹೇಳಿಕೆಗಳಿಗೆ ಉತ್ತರ ನೀಡಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.