ADVERTISEMENT

ಮೈಸೂರು: ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಿಗೆ ₹ 21 ಲಕ್ಷದ ಕಾರು!

ಕೋವಿಡ್‌ನಿಂದ ಆರ್ಥಿಕ ಸಂಕಷ್ಟ–ದೇಣಿಗೆ ದುರ್ಬಳಕೆ ಆರೋಪ

ಕೆ.ಓಂಕಾರ ಮೂರ್ತಿ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST
ಮೈಸೂರಿನ ಚಾಮರಾಜೇಂದ್ರ ಮೃಗಾಲಯ
ಮೈಸೂರಿನ ಚಾಮರಾಜೇಂದ್ರ ಮೃಗಾಲಯ   

ಮೈಸೂರು: ಕೋವಿಡ್‌ನಿಂದ ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದೇಣಿಗೆಗಾಗಿ ಮನವಿ ಮಾಡುತ್ತಿದ್ದರೆ, ಕರ್ನಾಟಕ ಮೃಗಾಲಯ ಪ್ರಾಧಿಕಾರವು ಅಧ್ಯಕ್ಷರಿಗಾಗಿ ₹ 21 ಲಕ್ಷದ ಇನೋವಾ ಕ್ರಿಸ್ಟಾ ಕಾರು ಖರೀದಿಸಿರುವುದು ಪ್ರಾಣಿಪ್ರಿಯರ ಹುಬ್ಬೇರಿಸಿದೆ.

ಈಗಿನ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಈ ಕಾರು ಬಳಸುತ್ತಿದ್ದು, ಪ್ರಾಣಿಗಳ ಹೆಸರಲ್ಲಿ ಜನರಿಂದ ಸಂಗ್ರಹಿಸಿದ ದೇಣಿಗೆ ದುರ್ಬಳಕೆಯಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಐದು ತಿಂಗಳ ಹಿಂದೆ ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ, ಹೊಸ ಕಾರು ಖರೀದಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಅಧ್ಯಕ್ಷರ ಹಳೆಯ ಕಾರನ್ನು ಇಲ್ಲಿನ ಚಾಮರಾಜೇಂದ್ರ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ನೀಡಲಾಗಿದೆ.

ADVERTISEMENT

‘ಇದುವರೆಗೆ ಬಳಸುತ್ತಿದ್ದ ಕಾರು ಹಳೆಯದ್ದಾಗಿದ್ದು, 2.35 ಲಕ್ಷ ಕಿ.ಮೀ ಸಂಚರಿಸಿದೆ. ಬಳಕೆಗೆ ಯೋಗ್ಯವಾಗಿಲ್ಲ. ರಾಜ್ಯದ ಎಲ್ಲಾ ಮೃಗಾಲಯಗಳಿಗೆ ಭೇಟಿ ನೀಡುತ್ತಿದ್ದು, ಹೊಸ ಕಾರಿನ ಅಗತ್ಯವಿದೆ’ ಎಂದು ಮಹಾದೇವಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದೇ ವೇಳೆ, ’ಬಳಕೆಗೆ ಯೋಗ್ಯವಲ್ಲವೆಂದು ಅಧ್ಯಕ್ಷರೇ ಹೇಳಿದ ಮೇಲೆ ಅದನ್ನು ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೀಡಿದ್ದೇಕೆ’ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ವೇಳೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ವಿಧಿಸಿದ್ದರಿಂದ ರಾಜ್ಯದ 9 ಮೃಗಾಲಯಗಳಲ್ಲಿ ಆದಾಯ ನಷ್ಟ ಉಂಟಾಗಿತ್ತು. ಪ್ರಾಧಿಕಾರಕ್ಕೆ 2018–19ರಲ್ಲಿ ₹ 58.84 ಲಕ್ಷ, 2019–20ರಲ್ಲಿ ₹ 66.49 ಲಕ್ಷ ಆದಾಯ ಬಂದಿದ್ದರೆ, 2020–21ರಲ್ಲಿ ಕೇವಲ ₹ 24.26 ಲಕ್ಷ ಆದಾಯವಷ್ಟೇ ಬಂದಿದೆ. ಅದೇ ಕಾರಣಕ್ಕಾಗಿ ಪ್ರಾಣಿ ದತ್ತು ಪಡೆದು ದೇಣಿಗೆ ನೀಡುವಂತೆ ನಟ ದರ್ಶನ್‌ ನೆರವು ಪಡೆದು ಮನವಿ ಮಾಡಿತ್ತು.

ಕಾರು ಇರಲಿಲ್ಲ: ‘2014–15ರಲ್ಲಿ ಅಂದಿನ ಅಧ್ಯಕ್ಷರಿಗಾಗಿ ಕಾರು ಖರೀದಿಸಲಾಗಿತ್ತು. ಆದರೆ, ನನಗೆ ಕಾರು ಇಲ್ಲ. ಹೀಗಾಗಿ, ಹಳೆಯ ಕಾರು ನನಗೆ ನೀಡಿ, ಅಧ್ಯಕ್ಷರಿಗೆ ಹೊಸ ಕಾರು ನೀಡಲಾಗಿದೆ. ತಾಂತ್ರಿಕವಾಗಿ ನೋಡುವುದಾದರೆ ಕಾರ್ಯನಿರ್ವಾಹಕ ನಿರ್ದೇಶಕರಿಗೂ ಹೊಸ ಕಾರು ಖರೀದಿಸಬೇಕು’ ಎಂದು ಅಜಿತ್‌ ಕುಲಕರ್ಣಿ ತಿಳಿಸಿದರು.

‘ಜೂನ್‌ನಲ್ಲಿ ಪ್ರಾಣಿ ದತ್ತು ಪ್ರಕ್ರಿಯೆಯಿಂದ ನಮಗೆ ಸಿಕ್ಕಿದ್ದು ₹ 1.5 ಕೋಟಿ. ಆದರೆ, ಮೃಗಾಲಯ ನಿರ್ವಹಣೆಗೆ ತಿಂಗಳಿಗೆ ₹ 2 ಕೋಟಿ ಬೇಕು‌‌‌’ ಎಂದರು.

*
ಕೋವಿಡ್‌ಗೆ ಮೊದಲೇ ಕಾರು ಖರೀದಿಗೆ ನಿರ್ಧರಿಸಲಾಗಿತ್ತು. ಪ್ರಾಧಿಕಾರ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಕಾರು ಬಂದು ತಿಂಗಳಾಯಿತು
-ಎಲ್‌.ಆರ್‌.ಮಹದೇವಸ್ವಾಮಿ, ಅಧ್ಯಕ್ಷ, ಕರ್ನಾಟಕ ಮೃಗಾಲಯ ಪ್ರಾಧಿಕಾರ

*
ಮೈಸೂರು ಮೃಗಾಲಯಕ್ಕೆ ಬಂದ ದೇಣಿಗೆ ಹಣ ದುರುಪಯೋಗಪಡಿಸಿಕೊಂಡಿಲ್ಲ. ಮೃಗಾಲಯ ಪ್ರಾಧಿಕಾರದ ಹಣ ಬಳಸಿ ಕಾರು ಖರೀದಿಸಲಾಗಿದೆ.
-ಅಜಿತ್‌ ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

-ಎಲ್‌.ಆರ್‌.ಮಹದೇವಸ್ವಾಮಿ, ಅಧ್ಯಕ್ಷ, ಕರ್ನಾಟಕ ಮೃಗಾಲಯ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.