ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೀಟು ಹಂಚಿಕೆ ಮಾಡಿದ್ದ 12 ಅಲೈಡ್ ಹೆಲ್ತ್‌ಸೈನ್ಸ್ ಕಾಲೇಜುಗಳಲ್ಲಿ ಆಯ್ಕೆ ಮಾಡಿಕೊಂಡ ಕೋರ್ಸಗಳೇ ಇಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದಾರೆ.
ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿದ ನಂತರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕೆಲ ಕೋರ್ಸ್‌ಗಳನ್ನು ತೆಗೆದು ಹಾಕಿ, ಕೆಲವು ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ವಿಶ್ವವಿದ್ಯಾಲಯ ತೆಗೆದು ಹಾಕಿದ ಕೋರ್ಸ್, ಕಾಲೇಜುಗಳು ಹಂಚಿಕೆಯಾಗಿರುವವರು ಆಯ್ಕೆ-3 ನಮೂದಿಸಿ ಮುಂದಿನ ಸುತ್ತಿನಲ್ಲಿ ಭಾಗವಹಿಸಬೇಕು ಎಂದು ಪ್ರಾಧಿಕಾರ ಸೂಚಿಸಿತ್ತು. ಸೀಟು ಲಭ್ಯತಾ ಪಟ್ಟಿಯಂತೆ ಎರಡನೇ ಮತ್ತು ಮೂರನೇ ಸುತ್ತಿನ ಸೀಟು ಹಂಚಿಕೆ ಮಾಡಿದ್ದರೂ ಕೆಲ ಕಾಲೇಜುಗಳಲ್ಲಿ ಆಯ್ಕೆ ಮಾಡಿಕೊಂಡ ಕೋರ್ಸ್‌ಗಳು ಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದಾರೆ.
‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಳುಹಿಸಿದ ಸೀಟು ಲಭ್ಯತಾ ಪಟ್ಟಿಯಂತೆ ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕ ಕಟ್ಟಿ ಕಾಲೇಜಿಗೆ ತೆರಳಿದಾಗ ಅಲ್ಲಿ ಅವರು ಆಯ್ಕೆ ಮಾಡಿಕೊಂಡ ಕೋರ್ಸ್‌ಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಂತಹ ಎಲ್ಲ ವಿದ್ಯಾರ್ಥಿಗಳಿಗೂ ಬದಲಿ ಕಾಲೇಜು ನೀಡಲಾಗಿದೆ. ವಿಷಯವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಗಮನಕ್ಕೆ ತರಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಒಂದು ಕಾಲೇಜಿನ ವಿಳಾಸವೇ ಇಲ್ಲ: ಸೀಟು ಹಂಚಿಕೆಯಾಗಿದ್ದ ಬನಶಂಕರಿ ಬಡಾವಣೆಯ ಅಪೋಲೊ ಅಪೆಕ್ಸ್ ಕಾಲೇಜಿಗೆ ತೆರಳಿದರೆ ಆ ವಿಳಾಸದಲ್ಲಿ ಕಾಲೇಜು ಇರಲಿಲ್ಲ. ಕಾಲೇಜಿನ ವಿಳಾಸವನ್ನೇ ತಪ್ಪು ನೀಡಲಾಗಿದೆ.
‘ಪ್ರವೇಶಕ್ಕಾಗಿ ತೆರಳಿದಾಗ ಕೆಇಎ ನೀಡಿದ್ದ ವಿಳಾಸದಲ್ಲಿ ಕಾಲೇಜು ಇರಲಿಲ್ಲ. ದೂರು ನೀಡಿದ ನಂತರ ಬದಲಿ ಕಾಲೇಜಿಗೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಟ್ಟರು’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.