ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿಯೇ ಸಮಾಜವಾದ ಮತ್ತು ಜಾತ್ಯತೀತ ತತ್ವ ಅಂತರ್ಗತವಾಗಿವೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ಡಾ. ಅಂಬೇಡ್ಕರ್ ವಿಚಾರ ವೇದಿಕೆ ಆಯೋಜಿಸಿದ್ದ ‘ಧರ್ಮಾಂತರ ಏಕೆ ಅತ್ಯವಶ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೆಸ್ಸೆಸ್‌ನವರು ಸಮಾಜವಾದ ಮತ್ತು ಜಾತ್ಯತೀತ ಪದವನ್ನು ಸಂವಿಧಾನದ ಪ್ರಸ್ತಾವನೆಯಿಂದ ತೆಗೆಯಬೇಕು ಎಂದು ಹೇಳುತ್ತಿದ್ದಾರೆ. ಸಂವಿಧಾನದ 27ನೇ ವಿಧಿಯಿಂದ ಹಿಡಿದು ರಾಜ್ಯ ನಿರ್ದೇಶಕ ತತ್ವದವರೆಗೆ ಎಲ್ಲ ಕಡೆ ಸಮಾನತೆ ಇದೆ. ಹಾಗಿದ್ದಾಗ ಸಮಾಜವಾದ ಪ್ರಸ್ತಾವನೆಯಲ್ಲಿ ಇದ್ದ ಮಾತ್ರಕ್ಕೆ ಯಾಕೆ ತೆಗೆಯಬೇಕು. ಸಂವಿಧಾನದಲ್ಲಿರುವ ಎಲ್ಲದರ ಸತ್ವವೇ ಸಮಾಜವಾದ ಎಂದು ಪ್ರತಿಪಾದಿಸಿದರು.
ತುರ್ತುಪರಿಸ್ಥಿತಿಯಲ್ಲಿ ಕೂಡ ಜಾತ್ಯತೀತತೆ ಮತ್ತು ಸಮಾಜವಾದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದರು.
ಗಾಂಧೀಜಿ ಮತ್ತು ಡಾ.ಅಂಬೇಡ್ಕರ್ ಅವರ ಕಾಲದಲ್ಲಿ ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ. ಏನೂ ಬದಲಾಗಿಲ್ಲ. ಈಗಲೂ ಕೂಡ ದಲಿತರಿಗೆ ಕ್ಷೌರ ಮಾಡುವುದಿಲ್ಲ. ದೇವಸ್ಥಾನ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ಕವಿ ಸುಬ್ಬು ಹೊಲೆಯಾರ್, ಲೇಖಕ ಮಂಗ್ಳೂರು ವಿಜಯ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ಟಿ.ಗಜೇಂದ್ರ, ಅಶ್ವಿನಿ ಬೋಧ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.