ADVERTISEMENT

₹60 ಸಾವಿರ ಕೇಳಿದ ಖಾಸಗಿ ಆಂಬುಲೆನ್ಸ್‌ ಸಿಬ್ಬಂದಿ? ತಾಳಿ ಅಡವಿಡಲು ಮುಂದಾದ ಮಗಳು

₹60 ಸಾವಿರ ಕೇಳಿದ ಖಾಸಗಿ ಆಂಬುಲೆನ್ಸ್‌ ಸಿಬ್ಬಂದಿ ?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:31 IST
Last Updated 21 ಏಪ್ರಿಲ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೋವಿಡ್‌ ಪೀಡಿತ ತಂದೆಯ ಶವ ಸಾಗಿಸಿದ್ದ ಖಾಸಗಿ ಆಂಬುಲೆನ್ಸ್‌ ಮಾಲೀಕ ಕೇಳಿದಷ್ಟು ಹಣ ನೀಡಲು ಸಾಧ್ಯವಾಗದೇ, ಮೃತ ವ್ಯಕ್ತಿಯ ಮಗಳು ತನ್ನ ತಾಳಿಯನ್ನೇ ಅಡವಿಡಲು ಮುಂದಾದ ಘಟನೆ ಇಲ್ಲಿ ನಡೆದಿದೆ.

‘ಕೋವಿಡ್‌ನಿಂದಾಗಿ ನನ್ನ ತಂದೆ ಗಂಭೀರ ಸ್ಥಿತಿಯಲ್ಲಿದ್ದರು. ಮಂಗಳವಾರ ಸಂಜೆ ಜೈ ಹನುಮಾನ್‌ ಆಂಬುಲೆನ್ಸ್‌ನವರಿಗೆ ಕರೆ ಮಾಡಿದೆವು. ಮತ್ತಿಕೆರೆಯಿಂದ ಸುಬ್ಬಯ್ಯ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದರು. ಆಂಬುಲೆನ್ಸ್‌ನ ಸಿಬ್ಬಂದಿ ₹60 ಸಾವಿರ ಕೊಟ್ಟರೆ ಮಾತ್ರ ಶವ ಕೊಡುವುದಾಗಿ ಹೇಳಿದರು. ಅದಕ್ಕೆ ಅನಿವಾರ್ಯವಾಗಿ ಮಾಂಗಲ್ಯ ಅಡವಿಡಲು ಮುಂದಾಗಿದ್ದೆ’ ಎಂದು ಮೃತರ ಮಗಳು ಹೇಳಿದರು.

‘ಹಣ ಹೊಂದಿಸಲು ಮಧ್ಯರಾತ್ರಿಯವರೆಗೆ ಓಡಾಡಿದ್ದೇವೆ. ಚಿತಾಗಾರದ ಮುಂದೆ ಗಂಟೆಗಟ್ಟಲೇ ಆಂಬುಲೆನ್ಸ್‌ ನಿಂತಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ಶವ ನೀಡಿದ್ದಾರೆ. ಕಾಯುವಿಕೆ ಸಮಯದ ಶುಲ್ಕ ಸೇರಿ ಒಟ್ಟು ₹13 ಸಾವಿರ ಕಟ್ಟಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ನಾವು ಉತ್ತರ ಕರ್ನಾಟಕದವರು. ಆರು ಸಾವಿರಕ್ಕೆ ನಾವು ಹೇಳುವುದು ಅರವತ್ತು ನೂರು ಎಂದು. ನಾನು ಅರವತ್ತು ನೂರು ಕೊಡಿ ಎಂದಿದ್ದನ್ನು ಅವರು ₹60 ಸಾವಿರ ಎಂದುಕೊಂಡಿದ್ದರು. ಮಾಸ್ಕ್‌ ಹಾಕಿದ್ದರಿಂದ ಅವರಿಗೆ ಸರಿಯಾಗಿ ಕೇಳಿಲ್ಲ ಎನಿಸುತ್ತದೆ. ನಮಗೆ ಕೊಟ್ಟಿರುವುದು ₹6 ಸಾವಿರ ಮಾತ್ರ. ಸುಮ್ಮನೆ ಆರೋಪ ಮಾಡಲಾಗುತ್ತಿದೆ’ ಎಂದು ಜೈ ಹನುಮಾನ್ ಆಂಬುಲೆನ್ಸ್‌ ಮಾಲೀಕ ಹನುಮಂತು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.