ADVERTISEMENT

ವಕೀಲರ ಗುಮಾಸ್ತರ ಕಾಯ್ದೆ ತಿದ್ದುಪಡಿ: ಕಾನೂನು ಇಲಾಖೆಗೆ ಹೈಕೋರ್ಟ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 23:31 IST
Last Updated 1 ಡಿಸೆಂಬರ್ 2025, 23:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯದ ವಕೀಲರ ಕಚೇರಿಗಳಲ್ಲಿ ದುಡಿಯುವ ಗುಮಾಸ್ತರ ಕುಟುಂಬಗಳ ಕಲ್ಯಾಣಕ್ಕಾಗಿ, ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಕಲಂ 27ಕ್ಕೆ ತಿದ್ದುಪಡಿ ಮಾಡಲು ಮೂರು ವಾರಗಳ ಗಡುವು ವಿಧಿಸಿರುವ ಹೈಕೋರ್ಟ್‌, ಇಲ್ಲವಾದಲ್ಲಿ ರಾಜ್ಯ ಕಾನೂನು ಇಲಾಖೆಯ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಈ ಸಂಬಂಧ, ‘ಕರ್ನಾಟಕ ರಾಜ್ಯ ವಕೀಲರ ಗುಮಾಸ್ತರ ಸಂಘ’ದ ಅಧ್ಯಕ್ಷ ಡಿ.ಶಿವಣ್ಣ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಪ್ರಕರಣದ ಅಮಿಕಸ್‌ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲರು) ಎಸ್‌.ಬಸವರಾಜು, ‘ಇತರೆ ಹೈಕೋರ್ಟ್‌ಗಳಲ್ಲಿ ಸ್ಟ್ಯಾಂಪ್‌ ಮೂಲಕ ಹಣ ಸಂಗ್ರಹಿಸಿ ಅದರಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಗುಮಾಸ್ತರ ಕ್ಷೇಮಾಭಿವೃದ್ಧಿಗೆ ನೀಡುವ ಪದ್ಧತಿಯನ್ನು ಕರ್ನಾಟಕದಲ್ಲೂ ಅನುಸರಿಸುವ ಅಗತ್ಯವಿದೆ. ಈ ‌ಕುರಿತಂತೆ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

‘ವಕೀಲರ ಕಲ್ಯಾಣ ಕಾಯ್ದೆ–1986ರ ಕಲಂ 27ಕ್ಕೆ ತಿದ್ದುಪಡಿ ತಂದು, ಗುಮಾಸ್ತರ ಕಲ್ಯಾಣಕ್ಕೆಂದೇ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರತ್ಯೇಕ ₹5 ಅಥವಾ ₹10 ಮೌಲ್ಯದ ಸ್ಟ್ಯಾಂಪ್‌ ಬಳಕೆಯನ್ನು ಜಾರಿಗೆ ತರಲಾಗಿದೆ. ಈ ಅಭ್ಯುದಯದ ಪದ್ದತಿ ರಾಜ್ಯದಲ್ಲೂ ಅನುಷ್ಠಾನಗೊಳ್ಳಬೇಕು. ಇದಕ್ಕಾಗಿ ಸರ್ಕಾರ ನಿಗದಿತ ಅವಧಿಯಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತಾಗಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಅರ್ಜಿಯನ್ನು ಇತ್ಯರ್ಥಪಡಿಸಿದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ತೀರ್ಪನ್ನು ಶೈತ್ಯಾಗಾರದಲ್ಲಿ ಇರಿಸಿಬಿಡಬಹುದು. ಇದರಿಂದ ಗುಮಾಸ್ತರ ಹೋರಾಟದ ಉದ್ದೇಶ ಈಡೇರುವುದಿಲ್ಲ. ಹಾಗಾಗಿ, ಕೊನೆಯ ಬಾರಿಗೆ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಲಾಗುತ್ತಿದೆ. ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ ಕೋರ್ಟ್‌ಗೆ ಖುದ್ದು ಹಾಜರಾಗಬೇಕು’ ಎಂದು ಎಚ್ಚರಿಸಿ ವಿಚಾರಣೆಯನ್ನು 2026ರ 9ಕ್ಕೆ ಮುಂದೂಡಿತು. ಅರ್ಜಿದಾರರ ಪರ ಜಿ.ಮಹೇಂದ್ರ ಹಾಗೂ ರಾಜ್ಯ ವಕೀಲರ ಪರಿಷತ್‌ ಪರ ಜಿ.ನಟರಾಜ್‌ ಹಾಜರಿದ್ದರು.

ನ್ಯಾ.ಎಂ.ನಾಗಪ್ರಸನ್ನ
* ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಕಲ್ಯಾಣ ಸಂಘ * ವಿಚಾರಣೆ 2026ರ ಜನವರಿ 9ಕ್ಕೆ ಮುಂದೂಡಿಕೆ
ರಾಜ್ಯದಾದ್ಯಂತ ವಕೀಲರ ಕಚೇರಿಗಳಲ್ಲಿ ಅಹರ್ನಿಶಿ ದುಡಿಯುತ್ತಿರುವ 400ಕ್ಕೂ ಹೆಚ್ಚು ನೋಂದಾಯಿತ ಮುನ್ಶಿಗಳನ್ನು ಮತ್ತು ಅವರ ಕುಟುಂಬಗಳನ್ನು ನಡುನೀರಿನಲ್ಲಿ ಕೈಬಿಡಲಾಗದು. ಅವರ ರಕ್ಷಣೆ ಅತಿ ಮುಖ್ಯ.
ನ್ಯಾ.ಎಂ.ನಾಗಪ್ರಸನ್ನ

ಅರ್ಜಿಯಲ್ಲಿ ಏನಿದೆ? 

* ರಿಟ್‌ ಅರ್ಜಿ ಸಂಖ್ಯೆ 20740/2005ರ ಅನುಸಾರ ವಕೀಲರ ಕಚೇರಿಯಲ್ಲಿ ದುಡಿಯುವ ಮುನ್ಶಿಗಳ ಕಲ್ಯಾಣ ನಿಧಿಯನ್ನು ಕ್ರೋಡೀಕರಿಸುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಯೋಜನೆ ರೂಪಿಸಬೇಕು ಎಂದು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ 2008ರ ಏಪ್ರಿಲ್‌ 16ರಂದು ನೀಡಿರುವ ತೀರ್ಪಿನ 8ನೇ ಖಂಡಿಕೆಯನ್ನು ಜಾರಿಗೊಳಿಸಲು ನಿರ್ದೇಶಿಸಬೇಕು.

* ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು 2022ರ ಮಾರ್ಚ್‌ 15ರಂದು ನೀಡಿರುವ ತೀರ್ಪಿನ ಅನುಸಾರ ಪರಿಣಾಮಕಾರಿ ಯೋಜನೆ ರೂಪಿಸಲು ಮತ್ತು ಅವುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಕಾನೂನು ಇಲಾಖೆ ಮತ್ತು ರಾಜ್ಯ ವಕೀಲರ ಪರಿಷತ್‌ಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಪರಿಗಣಿಸಿ ಶೀಘ್ರವೇ ಸೂಕ್ತ ಯೋಜನೆ ರೂಪಿಸಲು ನಿರ್ದೇಶಿಸಬೇಕು.

* ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಕಲಂ 3 (ಎ) ಅನುಸಾರ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬದ ಸದಸ್ಯರಿಗೆ ಒದಗಿಸಲಾಗುವ ನೆರವಿನ ಬಗ್ಗೆ ಸೂಕ್ತ ಯೋಜನೆ ಅಥವಾ ಮಾರ್ಗಸೂಚಿ ರೂಪಿಸುವಂತೆ ನಿರ್ದೇಶಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.