ADVERTISEMENT

ಕುತೂಹಲ ಕೆರಳಿಸಿದ ಅಮಿತ್‌ ಶಾ ಪ್ರತ್ಯೇಕ ಸಭೆ

ಇಂದು ಖಾತೆ ಹಂಚಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 19:32 IST
Last Updated 17 ಜನವರಿ 2021, 19:32 IST
 ಅಮಿತ್‌ ಶಾ
ಅಮಿತ್‌ ಶಾ   

ಬೆಂಗಳೂರು: ಶನಿವಾರ ರಾತ್ರಿ ಬಿಜೆಪಿ ಪ್ರಮುಖ ನಾಯಕರ ಸಮಿತಿ ಸಭೆಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಕ್ಷದ ನಾಲ್ವರು ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಟೇಲ್‌ನಿಂದ ತೆರಳಿದ ಬಳಿಕ ಈ ಸಭೆ ನಡೆದಿದೆ. ಅದರಲ್ಲಿ ಬಿ.ಎಲ್‌.ಸಂತೋಷ್, ಪ್ರಲ್ಹಾದ ಜೋಷಿ, ಸಿ.ಟಿ.ರವಿ ಮತ್ತು ನಳಿನ್‌ ಕುಮಾರ್ ಕಟೀಲ್ ಇದ್ದರು. ಇದರ ಬೆನ್ನಲ್ಲೇ ನಾಯ
ಕತ್ವ ಬದಲಾವಣೆ ಚರ್ಚೆಯೂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಆರಂಭವಾಗಿದೆ.

‘ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಕೆಲವು ಶಾಸಕರು ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕೋವಿಡ್‌ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿ
ದ್ದೀರಿ’ ಎಂದು ಶಾ ಅವರು ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಸೂಚಿಸಿದರು.

ADVERTISEMENT

ಪ್ರಮುಖರ ಸಭೆಯಲ್ಲಿ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಗ್ರಾಮಪಂಚಾಯತ್‌ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಸಾಧನೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

‘ಸರ್ಕಾರದ ವರ್ಚಸ್ಸು ವೃದ್ಧಿಸಲು ಕ್ರಮ ತೆಗೆದುಕೊಳ್ಳಬೇಕು. ಪಕ್ಷದ ನಾಯಕತ್ವದ ಬಗ್ಗೆ ಶಾಸಕರ ಬಹಿರಂಗ ಟೀಕೆಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬರಬಹುದು. ಇದಕ್ಕೆ ಅವಕಾಶ ನೀಡಬಾರದು ಎಂದು ಶಾ ಹೇಳಿದರು. ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸು
ತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಇನ್ನಷ್ಟು ಜನಪರ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಬೇಕು’ ಎಂದೂ ಶಾ ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಬೆಳಗಾವಿಯಲ್ಲಿ ಕೆಲವು ಶಾಸಕರು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಮನವಿ ಸಲ್ಲಿಸಲು ಹೋದಾಗ, ದೆಹಲಿಗೆ ಬಂದು ಕಾಣುವಂತೆ ಸೂಚಿಸಿದರು.

ಇಂದು ಖಾತೆ ಹಂಚಿಕೆ ಸಾಧ್ಯತೆ

ಇತ್ತೀಚೆಗಷ್ಟೇ ಪ್ರಮಾಣ ಸ್ವೀಕರಿಸಿದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಒಟ್ಟು ಏಳು ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು, ಅಬಕಾರಿ ಸಚಿವರಾಗಿದ್ದ ಎಚ್‌.ನಾಗೇಶ್‌ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಹೊಸ ಸಚಿವರಿಗೆ ಖಾತೆ ಹಂಚಿಕೆಯ ಜತೆಗೆ ಕೆಲವು ಸಚಿವರ ಖಾತೆ ಬದಲಾವಣೆಯ ಸಾಧ್ಯತೆಯೂ ಇದೆ. ಗೃಹ ಸಚಿವ ಅಮಿತ್‌ ಶಾ ಅವರ ಎರಡು ದಿನಗಳ ರಾಜ್ಯ ಭೇಟಿಯ ಕಾರಣ ಖಾತೆ ಹಂಚಿಕೆ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.