ADVERTISEMENT

ಪಂಚಭೂತಗಳಲ್ಲಿ ಲೀನವಾದ ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 10:14 IST
Last Updated 13 ನವೆಂಬರ್ 2018, 10:14 IST
   

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರಕ್ಕೆ ನಗರದ ಚಾಮರಾಜಪೇಟೆಚಿತಾಗಾರದಲ್ಲಿಮಂಗಳವಾರ ಸ್ಮಾರ್ತ ಋಗ್ವೇದೀಯ ಆಶ್ವಲಾಯನ ಸೂತ್ರದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅನಂತಕುಮಾರ್ ಸೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸೇನಾ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು ಮತ್ತು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

‘ಭಾರತ್ ಮಾತಾ ಕಿ ಜೈ,...ಅನಂತಕುಮಾರ್ ಅಮರ್‌ ರಹೇ...’ಘೋಷಣೆಗಳು ಮುಗಿಲು ಮುಟ್ಟಿದವು. ಮುಂಜಾನೆ 7.30ಕ್ಕೆ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ಸ್ವಗೃಹ ‘ಸುಮೇರು’ವಿನಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ಕ್ಕೆ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಪಕ್ಷದ ಕಚೇರಿಯಲ್ಲಿ ಗೌರವ ಸಲ್ಲಿಸಿದರು.

ADVERTISEMENT

ಅಲ್ಲಿಂದ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಸಾವಿರಾರು ಸಾರ್ವಜನಿಕರು ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದರು. ಪುರೋಹಿತ ಶ್ರೀನಾಥ ಶರ್ಮಾ ಮಾರ್ಗದರ್ಶನದಲ್ಲಿ ಚಾಮರಾಜಪೇಟೆಯ ಚಿತಾಗಾರದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಅಂತ್ಯಸಂಸ್ಕಾರ ನಡೆಯಿತು.

ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಶ್ ಗೋಯಲ್, ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಹಂಗಾಮಿ ಸಭಾಪತಿಬಸವರಾಜ್ ಹೊರಟ್ಟಿ ಅಂತ್ಯಸಂಸ್ಕಾರದ ವೇಳೆ ಉಪಸ್ಥಿತರಿದ್ದರು. ಕಣ್ಣೀರು ಮಿಡಿದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.