ADVERTISEMENT

ಬಂಗಾರಪೇಟೆ: ಮಕ್ಕಳ ಮೇಲೆ ಕಳಚಿ ಬಿದ್ದ ಅಂಗನವಾಡಿ ಚಾವಣಿ ಕಾಂಕ್ರೀಟ್‌

ನಾಲ್ವರು ಮಕ್ಕಳಿಗೆ ಗಾಯ * ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
ಕಳಚಿ ಬಿದ್ದ ಅಂಗನವಾಡಿ ಚಾವಣಿ ತಳಪದರು 
ಕಳಚಿ ಬಿದ್ದ ಅಂಗನವಾಡಿ ಚಾವಣಿ ತಳಪದರು     

ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ದಾಸರಹೊಸಹಳ್ಳಿಯ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್‌ ತಳಪದರ (ಆರ್‌ಸಿಸಿ ಸೀಲಿಂಗ್‌ ಕಾಂಕ್ರೀಟ್‌) ಶನಿವಾರ ಕಳಚಿ ಬಿದ್ದು ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಲಾಸ್ಯಾ, ಪರಿಣಿತಿ, ಲಿಖಿತಾ ಮತ್ತು ಚಾನ್ವಿ ಎಂಬ ಮಕ್ಕಳಿಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಾಲ್ಕೂ ಮಕ್ಕಳು ಮೂರರಿಂದ ನಾಲ್ಕು ವರ್ಷದವರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಿಖಿತಾ ಮತ್ತು ಚಾನ್ವಿ ಎಂಬ ಮಕ್ಕಳ ತಲೆಗೆ ಪೆಟ್ಟು ಬಿದ್ದಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಲಾಸ್ಯಾ ಕಾಲಿಗೆ ಏಟು ಬಿದ್ದಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪರಿಣಿತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ADVERTISEMENT

ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು ಏಳು ಮಕ್ಕಳಿದ್ದಾರೆ. ಚಾವಣಿಯ ಸಿಮೆಂಟ್‌ ಉದುರಲು ಆರಂಭವಾಗುತ್ತಿದ್ದಂತೆಯೇ ಮೂವರು ಬಾಲಕರು ಹೊರಗೆ ಓಡಿ ಬಂದಿದ್ದಾರೆ. ನಾಲ್ವರು ಬಾಲಕಿಯರು ಹೆದರಿ ಕೊಠಡಿಯಲ್ಲಿಯೇ ಕುಳಿತಿದ್ದರು.

ಈ ಘಟನೆ ನಡೆದಾಗ ಅಂಗನವಾಡಿ ಕಾರ್ಯಕರ್ತೆ ಕೇಂದ್ರದಲ್ಲಿ ಇರಲಿಲ್ಲ. ಅಂಗನವಾಡಿ ಅಕ್ಕಪಕ್ಕದ ಮನೆಯವರ ನೆರವಿನಿಂದ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದರು.

‘ಸುಮಾರು 30 ವರ್ಷ ಹಳೆಯ ಅಂಗನವಾಡಿ ಕಟ್ಟಡ ಶಿಥಿಲಗೊಂಡಿತ್ತು. ಎಂಟು ವರ್ಷದ ಹಿಂದೆ ನವೀಕರಣ ಮಾಡಲಾಗಿತ್ತು. ಕಳಪೆ ಕಾಮಗಾರಿ ಕಾರಣ ಚಾವಣಿ ತಳಪದರ ಕುಸಿದಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಕ್ರಮಕ್ಕೆ ಶಿಫಾರಸು: ಅಂಗನವಾಡಿ ಕೇಂದ್ರವನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗೆ ವರದಿ ನೀಡಲಾಗಿದೆ ಎಂದು ಬಂಗಾರಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ)  ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.