ADVERTISEMENT

ಸೋಮವಾರ ನಾಮಪತ್ರ ಸಲ್ಲಿಕೆ: ಅನಿತಾ ಕುಮಾರಸ್ವಾಮಿ

ಧರ್ಮಸ್ಥಳದಲ್ಲಿ ಬಿ ಫಾರಂಗೆ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 9:52 IST
Last Updated 12 ಅಕ್ಟೋಬರ್ 2018, 9:52 IST
ಶುಕ್ರವಾರ ಅನಿತಾ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ಹೊರಬಂದರು.
ಶುಕ್ರವಾರ ಅನಿತಾ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ಹೊರಬಂದರು.   

ಉಜಿರೆ: ಅನಿತಾ ಕುಮಾರಸ್ವಾಮಿ ಅವರು ಶುಕ್ರವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಶತರುದ್ರಾಭಿಷೇಕ ಸೇವೆ ಸಲ್ಲಿಸಿ, ಬಿ. ಫಾರಂ ಗೆ ದೇವರ ಸನ್ನಿಧಿಯಲ್ಲಿ ಪೂಜೆ ಮಾಡಲಾಯಿತು.

ಬಳಿಕ ಹೆಗ್ಗಡೆಯವರ ಬೀಡಿಗೆ ಬಂದ ಅನಿತಾ ಕುಮಾರಸ್ವಾಮಿ ಅವರನ್ನು ಹೇಮಾವತಿ ವಿ. ಹೆಗ್ಗಡೆ ಸ್ವಾಗತಿಸಿದರು. ಧರ್ಮಾಧೀಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಅನಿತಾ, ಆಶೀರ್ವಾದ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇದೇ 15ರಂದು ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಗೆಲುವು ಖಚಿತ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಕ್ಬಾಲ್ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್‌ನಲ್ಲಿ ಬಂಡಾಯವಿಲ್ಲ. ಕಾದು ನೋಡಿ ಎಂದ ಅವರು, ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂದರು.

ಸಚಿವ ಮಹೇಶ್ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪೂರ್ಣ ಬೆಂಬಲ ನೀಡುವುದಾಗಿ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದರು.

ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಸ್ವಾಮೀಜಿಯವರ ಬಗ್ಗೆ ನಮಗೆಲ್ಲ ಅಪಾರ ಗೌರವ ಇದೆ. ಆದರೆ, ಅವರು ಆಗಾಗ ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ಏನಿದ್ದರೂ ಕಾದು ನೋಡಿ’ ಎಂದಷ್ಟೆ ಹೇಳಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಉಪಸ್ಥಿತರಿದ್ದರು. ನಂತರ ಅನಿತಾ ಕುಮಾರಸ್ವಾಮಿ ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಪ್ರಯಾಣ ಬೆಳೆಸಿದರು.

*


ಹೈಕಮಾಂಡ್ ತೀರ್ಮಾನವೇ ಅಂತಿಮ: ಜಿಯಾವುಲ್ಲಾ
ರಾಮನಗರ:
ಉಪ‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿ‌ಮ. ಅವರ ಅಣತಿಯಂತೆ ನಡೆಯಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಹೇಳಿದರು.

ಶುಕ್ರವಾರ ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ಕಾಂಗ್ರೆಸ್ನಲ್ಲಿ ಬಂಡಾಯಕ್ಕೆ ಅವಕಾಶ ಇಲ್ಲ. ಇಕ್ಬಾಲ್ ಹುಸೇನ್ ಹಾಗೂ ಸಿ.ಎಂ. ಲಿಂಗಪ್ಪ ಅವರನ್ನು ಮನವೊಲಿಸಲಾಗುವುದು. ಪಕ್ಷವು ಯಾರನ್ನು ಸೂಚಿಸುತ್ತದೆಯೋ ಅವರ ಪರ ಪ್ರಚಾರ‌‌ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.