
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ತೊಡಿಸಿದರು.
-ಪ್ರಜಾವಾಣಿ ಚಿತ್ರ–ಪುಷ್ಕರ್ ವಿ.
ಬೆಂಗಳೂರು: ಮಾದಕವಸ್ತು (ಡ್ರಗ್ಸ್) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ಎಎನ್‌ಟಿಎಫ್) ಅಸ್ತಿತ್ವಕ್ಕೆ ಬಂದಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರ್ಯಪಡೆಗೆ ಚಾಲನೆ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ‘ಪೀಕ್ ಕ್ಯಾಪ್’ ವಿತರಿಸಿದರು.
ಸಿದ್ದರಾಮಯ್ಯ ಮಾತನಾಡಿ, ‘ಎಡಿಜಿಪಿ ಮಟ್ಟದ ಅಧಿಕಾರಿ ಕಾರ್ಯಪಡೆ ಮುಖ್ಯಸ್ಥರಾಗಿ ಇರಲಿದ್ದು, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ 56 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
‘ಐದು ದಶಕಗಳ ಬಳಿಕ ಪೊಲೀಸ್ ಸಿಬ್ಬಂದಿಯ ಕ್ಯಾಪ್‌ನಲ್ಲಿ ಬದಲಾವಣೆ ಆಗಿದೆ. ಕಾರ್ಯಕ್ಷಮತೆಯೂ ಬದಲಾಗಬೇಕು. ದಕ್ಷವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ತರಬೇಕು’ ಎಂದು ಕಿವಿಮಾತು ಹೇಳಿದರು.
‘ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್ ಕ್ಯಾಪ್’ಗಳನ್ನು ಆಯ್ಕೆ ಮಾಡಿದ್ದು ನಾನೇ. ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ಯಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿರುವುದು ರಾಜ್ಯದ ಘನತೆ ಹೆಚ್ಚಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಶಾಮೀಲಾಗುತ್ತಾರೆ. ಡ್ರಗ್ಸ್ ಪೆಡ್ಲರ್ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್ಗಳಾಗುತ್ತಾರೆ ಎಂದು ಎಚ್ಚರಿಸಿದರು.
‘ಅಪರಾಧಿ ಹಾಗೂ ಕ್ರಿಮಿನಲ್ಗಳೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು. ದಿನೇ ದಿನೇ ಪೊಲೀಸರೆಂದರೆ ಕ್ರಿಮಿನಲ್ಗಳಿಗೆ ಭಯ ಕಡಿಮೆಯಾಗುತ್ತಿದೆ. ಯಾಕೆ ಕಡಿಮೆಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರು ನಗರ ಹಾಗೂ ಇತರೆ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ. ನೆರೆ ಮನೆಯ ಆದಿಕೇಶವಲು ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ’ ಎಂದು ಸಲಹೆ ನೀಡಿದರು.
‘ಯಾವುದೇ ಸರ್ಕಾರ ಬಂದರೂ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ. ರಾಜಕಾರಣಿಗಳ ಹಿಂಬಾಲಕರಾದರೇ ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ಅವಕಾಶ ಮಾಡಿಕೊಡಬೇಡಿ’ ಎಂದು ಕಿವಿ ಮಾತು ಹೇಳಿದರು.
‘ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ವಿಸ್ತರಣೆ ಕಷ್ಟವಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಸಂಚಾರ ದಟ್ಟಣೆ ನಿವಾರಣೆಗೆ ಇರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ’ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಶೇಕಡ 85ರಷ್ಟು ಸಿಬ್ಬಂದಿಯ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದರಿಂದ ಸಿಬ್ಬಂದಿಯ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದರು.
ಶಾಸಕ ರಿಜ್ವಾನ್ ಅರ್ಷದ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿಜಿಪಿಗಳಾದ ರಾಮಚಂದ್ರರಾವ್, ಪ್ರಣವ್ ಮೊಹಾಂತಿ ಹಾಜರಿದ್ದರು.
ಮಹಿಳಾ ಕಾನ್‌ಸ್ಟೆಬಲ್ ಪೀಕ್ ಕ್ಯಾಪ್ ಧರಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು.
ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿ ಮತ್ತೆ ವ್ಯಸನಕ್ಕೆ ಒಳಗಾಗದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಕಾರ್ಯಕ್ರಮವನ್ನು ಪರಿಚಯಿಸಿದೆ. ಮತ್ತೆ ಡ್ರಗ್ಸ್ ಚಟಕ್ಕೆ ಬೀಳಬಾರದು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಆ ವ್ಯಕ್ತಿಯ ಮೇಲೆ ನಿಗಾ ಇಡಲು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನಿಯೋಜಿಸಲಾಗುತ್ತದೆ. ಮೂರು ವರ್ಷದವರೆಗೆ ಈ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಲಿದ್ದು ಅವರಿಗೆ ಚಿಕಿತ್ಸೆ ಪುನರ್ವಸತಿ ಮತ್ತು ಆರೈಕೆಗೆ ನೆರವು ನೀಡಲಿದ್ದಾರೆ.
ಕೆಎಸ್ಆರ್ಪಿ ಸೇರಿ ರಾಜ್ಯದಲ್ಲಿ ಖಾಲಿಯಿರುವ 14 ಸಾವಿರ ಕಾನ್ಸ್ಟೆಬಲ್ಗಳ ಪೈಕಿ 8500 ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಇನ್ನೊಂದು ವಾರದಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು.–ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.