ADVERTISEMENT

ಮತಾಂತರ ನಿಷೇಧ ಕಾಯ್ದೆ: ನ.12ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

100ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಸೇರಿ ಒತ್ತಡ: ಪ್ರಮೋದ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 11:20 IST
Last Updated 9 ನವೆಂಬರ್ 2021, 11:20 IST

ಬಾಗಲಕೋಟೆ: ’ಮತಾಂತರ ಮಾಡುವವರನ್ನು ಹದ್ದುಬಸ್ತಿನಲ್ಲಿಡಲು ರಾಜ್ಯದಲ್ಲಿ ತಕ್ಷಣ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಲು ನವೆಂಬರ್ 12ರಂದು 100ಕ್ಕೂ ಹೆಚ್ಚು ಮಠಾಧೀಶರನ್ನು ಕರೆದೊಯ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು‘ ಎಂದು ಶ್ರೀರಾಮಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಶೇ 99ರಷ್ಟು ಕ್ರೈಸ್ತರು ಮತಾಂತರ ಆಗಿರುವ ಹಿಂದೂಗಳೇ ಆಗಿದ್ದಾರೆ. ಅವರು ಲಂಡನ್, ಇಟಲಿಯಿಂದ ಬಂದವರು ಅಲ್ಲ. ಒತ್ತಾಯವೋ, ಆಸೆಯೋ–ಅಮಿಷವೋ ಗೊತ್ತಿಲ್ಲ. ಮತಾಂತರ ಆಗಿದ್ದಾರೆ ಎಂದರು.

ಮತಾಂತರ ಮಾಡುವವರು ಶಾಲೆ, ಆಸ್ಪತ್ರೆ, ಅನಾಥಾಲಯಗಳ ತೆರೆದು ಮಾಡುತ್ತಿರುವ ಸೇವೆ ಎಲ್ಲವೂ ಬೂಟಾಟಿಕೆ. ಅವೆಲ್ಲವೂ ಕೊನೆಯಾಗುವುದು ಕೊನೆಗೆ ಮತಾಂತರದಲ್ಲಿ. ದೇಶದ ಸಂವಿಧಾನ ಚರ್ಚ್ ಕಟ್ಟಿ ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದೆ ಹೊರತು ಮತಾಂತರಕ್ಕೆ ಅಲ್ಲ ಎಂದರು.

ADVERTISEMENT

ಬಾಗಲಕೋಟೆ ಜಿಲ್ಲೆಯ ಎಲ್ಲ ಲಂಬಾಣಿ ತಾಂಡಾಗಳ ಒಳಗೂ ಪಾದ್ರಿಗಳು ಹೊಕ್ಕಿದ್ದಾರೆ. ಕೆಲವು ಕಡೆ ಇಡೀ ತಾಂಡಾಗಳನ್ನೇ ಮತಾಂತರ ಮಾಡಲಾಗಿದೆ. ಗೋವಾಕ್ಕೆ ಕರೆದೊಯ್ದು ಅಲ್ಲಿ ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಲಾಲ್‌ ಪ್ರಮಾಣ ಪತ್ರ ನಿಲ್ಲಿಸಿ:’ದೇಶದೊಳಗೆ ಮಾರಾಟಕ್ಕೆ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಸಿದ್ಧ ಆಹಾರಕ್ಕೆ ಹಲಾಲ್‌ ಹೆಸರಿನ ಪ್ರಮಾಣಪತ್ರ ಪಡೆಯಬೇಕಿದೆ. ಅದನ್ನು ಪಡೆಯಲು ಕೆಲವು ಮುಸ್ಲಿಂ ಸಂಘಟನೆಗಳಿಗೆ ಹಣ ಕೊಡಬೇಕಿದೆ. ಹೀಗೆ ಸಂಗ್ರಹವಾಗುವ ಸಾವಿರಾರು ಕೋಟಿ ಹಣ ಭಯೋತ್ಪಾದಕರಿಗೆ, ಗೋ ಹಂತಕರಿಗೆ, ದೇಶ ವಿರೋಧಿಗಳಿಗೆ ಹೋಗುತ್ತಿದೆ. ಅದರ ವಿರುದ್ಧ ಹಿಂದೂ ರಾಷ್ಟ್ರನಿರ್ಮಾಣ ಒಕ್ಕೂಟದ ಹೆಸರಿನಲ್ಲಿ ಹೋರಾಟ ಕೈಗೊಂಡಿದ್ದೇವೆ‘ ಎಂದು ಹೇಳಿದರು.

’ರಾಜ್ಯದಲ್ಲೂ ಎಸ್‌ಡಿಪಿಐ, ಪಿಎಫ್‌ಐ, ಎಂಐಎಂ ಹಾಗೂ ಸಿಎಎ ವಿರೋಧಿ ಹೋರಾಟಕ್ಕೂ ಅಲ್ಲಿಂದಲೇ ಹಣ ಬಂದಿದೆ‘ ಎಂದುಮುತಾಲಿಕ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.