ADVERTISEMENT

ಮೂವರು ಉಪ ಮುಖ್ಯಮಂತ್ರಿ: ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ- ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:54 IST
Last Updated 6 ಜನವರಿ 2024, 6:54 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ಮೂರು ಉಪಮುಖ್ಯಮಂತ್ರಿ ಹುದ್ದೆ ವಿಚಾರ ಕುರಿತು ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ನೇಮಕದ ಬಗ್ಗೆ ಸಚಿವರು ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ರಾಜಣ್ಣ ಅವರ ಹೇಳಿಕೆಯೂ ಅಷ್ಟೆ. ಅವರ ದೃಷ್ಟಿಯಲ್ಲಿ ಒಳ್ಳೆಯದು ಇರಬಹುದು. ಹೀಗಾಗಿ ಹೇಳಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ' ಎಂದರು.

ADVERTISEMENT

ಸಚಿವರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು 'ಒಬ್ಬೊಬ್ಬರು ಒಂದೊಂದು ಕಾರಣ ಇಟ್ಟುಕೊಂಡು ದೆಹಲಿಗೆ ಹೋಗುತ್ತಾರೆ. ಈ ವೇಳೆ ಪಕ್ಷದ ಮುಖ್ಯ ಕಚೇರಿಗೆ ಹೋಗಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡುವುದು, ಸಾಧ್ಯವಾದರೆ ಅಧ್ಯಕ್ಷರ ಜತೆ ಚರ್ಚಿಸುತ್ತಾರೆ. ಆಡಳಿತದಲ್ಲಿರುವಾಗ ಪಕ್ಷದ ಹೈಕಮಾಂಡ್ ಸಲಹೆಗಳನ್ನು ಸ್ವೀಕರಿಸಬೇಕು. ಇದೆಲ್ಲ ಸಾಮಾನ್ಯವಾಗಿ ನಡೆಯುವ ಬೆಳವಣಿಗೆ. ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ' ಎಂದು ಹೇಳಿದರು.

'ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಯಾರು ಹೇಳಿಲ್ಲ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಮಾಧ್ಯಮದಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಸೂಚಿಸಿದರೆ ಮುಂದಿನ ತೀರ್ಮಾನದ ಬಗ್ಗೆ ತಿಳಿಸುತ್ತೇನೆ' ಎಂದರು.

'ಬಾಂಬ್ ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಕಸ್ತೂರು ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೂ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಐಪಿ ಅಡ್ರೆಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ' ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.