ADVERTISEMENT

ಮಂತ್ರಿಯಾಗದ್ದಕ್ಕೆ ಬೇಸರವಿದೆ, ಪಕ್ಷದ ಚೌಕಟ್ಟಿನಲ್ಲಿ ಸಹಿಸಿಕೊಳ್ಳುವೆ: ಬೆಲ್ಲದ

ಸಚಿವ ಸ್ಥಾನ ಸಿಗದಿರುವುದಕ್ಕೆ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:17 IST
Last Updated 5 ಆಗಸ್ಟ್ 2021, 12:17 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಧಾರವಾಡ: ‘ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗದಿರುವುದು ನನಗೂ ಬೇಸರ ತರಿಸಿದೆ. ಆದರೆ ಪಕ್ಷದ ಚೌಕಟ್ಟಿನಲ್ಲಿ ನಾನು ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಳೆದ ಎರಡು ಅವಧಿಯಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಬಾರಿ ಮುಖ್ಯಮಂತ್ರಿ ಸ್ಥಾನ ಪರಿಗಣಿಸಲ್ಪಟ್ಟು, ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬರುವಂತಾಗಿದ್ದು ನನ್ನ ಸೌಭಾಗ್ಯ. ಆದರೆ ಸಚಿವ ಸ್ಥಾನ ಸಿಗದಿರುವುದರಿಂದ ಕ್ಷೇತ್ರದ ಜನರ ಸೇವೆಗೆ ಯಾವುದೇ ಅಡೆತಡೆ ಬಾರದು‘ ಎಂದಿದ್ದಾರೆ.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜತೆಗೆ ರಾಜಕೀಯ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆಯೂ ಬಾರದಂತೆ ಕೆಲಸ ಮಾಡಿದ್ದೇನೆ. ಶಾಸಕನಾಗಿ ಇನ್ನಷ್ಟು ಕೆಲಸ ಮಾಡಲು ನಾನು ಸಿದ್ಧ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವುದರ ಜತೆಗೆ ನಂಬಿಕೊಂಡು ಬಂದ ಸಿದ್ಧಾಂತ, ಸ್ವಚ್ಛ ಮತ್ತು ಭ್ರಷ್ಟ್ರಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ಧನಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಜೀವನದಲ್ಲಿ ಸೋಲು, ಗೆಲುವು ಶಾಶ್ವತವಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ. ಈಗಿರುವ ಸಂದರ್ಭದಲ್ಲಿ ಶಾಸಕನಾಗಿ, ಎಲ್ಲರ ಸ್ನೇಹಿತನಾಗಿ ಈ ಕ್ಷೇತ್ರದ ಕೆಲಸವನ್ನು ಮೊದಲಿನಂತೆ ಮಾಡಲು ನಾನು ಸದಾ ಸಿದ್ದನಿದ್ದೇನೆ.ಕೊರನಾ ಸಂದರ್ಭದಲ್ಲಿ ಯಾರೊಬ್ಬರೂ ಬೀದಿಗಿಳಿದು ಹೋರಾಟ ನಡೆಸಬಾರದು‘ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.