ADVERTISEMENT

ಶೇ 50ರಷ್ಟು ಅಡಿಕೆ ಇಳುವರಿ ಖೋತಾ

ಮಲೆನಾಡಿನಲ್ಲಿ ಅಧಿಕ ಮಳೆ, ಕೊಳೆ ರೋಗ ಕಾರಣ

ಚಂದ್ರಹಾಸ ಹಿರೇಮಳಲಿ
Published 15 ನವೆಂಬರ್ 2019, 23:42 IST
Last Updated 15 ನವೆಂಬರ್ 2019, 23:42 IST
ರಮೇಶ್‌ ಹೆಗ್ಡೆ
ರಮೇಶ್‌ ಹೆಗ್ಡೆ   

ಶಿವಮೊಗ್ಗ: ಅಡಿಕೆ ಧಾರಣೆ ಕುಸಿಯುತ್ತಿರುವಮಧ್ಯೆಯೇ, ಅಧಿಕ ಮಳೆ ಪರಿಣಾಮ ಮಲೆನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಅಡಿಕೆ ಇಳಿಯುವರಿ ಕುಂಠಿತವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆಯುವ ಪ್ರದೇಶ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ದಟ್ಟ ಅರಣ್ಯ ಪ್ರದೇಶಗಳ ಮಧ್ಯದಲ್ಲೂ ಹೊಸ ಅಡಿಕೆ ಮರಗಳು ತಲೆಎತ್ತಿವೆ. ನೆರೆಯ ದಾವಣಗೆರೆ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶವಿದೆ. ಚನ್ನಗಿರಿ ತಾಲ್ಲೂಕಿನಲ್ಲೇ 36 ಸಾವಿರ ಹೆಕ್ಟೇರ್ ಅಡಿಕೆ ಕ್ಷೇತ್ರವಿದೆ. ಅಧಿಕ ಮಳೆಈ ಬಾರಿ ಶೇ 60ರಷ್ಟು ತೋಟಗಳಲ್ಲಿನ ಮರಗಳಿಗೆ ಕುತ್ತು ತಂದಿದೆ.

ಕಾಡುತ್ತಿರುವ ಶಿಲೀಂದ್ರ ರೋಗ: ಅಧಿಕ ಮಳೆಯ ಪರಿಣಾಮ ಅಡಿಕೆ ಮರಗಳು ಕೊಳೆ ರೋಗ, ನೀರುಗೊಳೆ, ಬೂದುಗೊಳೆ ರೋಗಗಳಿಗೆ ತುತ್ತಾಗಿವೆ. ಎಲ್ಲೆಡೆ ಮರಗಳು ಮೈಮುರಿದುಕೊಂಡು ಬೀಳುತ್ತಿವೆ. ಮೊದಲೆಲ್ಲ ದಟ್ಟ ಅರಣ್ಯ ಪ್ರದೇಶದಲ್ಲಿಬೆಳೆದ ಅಡಿಕೆ ಮರಗಳಿಗೆ ಕೊಳೆ ರೋಗಕಾಡುತ್ತಿತ್ತು. ಈ ಬಾರಿ ಇಡೀ ಮಲೆನಾಡಿನ ಬಹುತೇಕ ತೋಟಗಳಿಗೆಸಮಸ್ಯೆ ವ್ಯಾಪಿಸಿದೆ. ಎಕರೆಗೆ 7ರಿಂದ 8 ಕ್ವಿಂಟಲ್ ಇಳುವರಿಸಿಗುತ್ತಿತ್ತು. ಮಲೆನಾಡಿನಲ್ಲಿ ಪ್ರತಿ ವರ್ಷ 1 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ.ಈ ಬಾರಿ ಶೇ 50ರಷ್ಟು ಅಡಿಕೆ ಇಳುವರಿ ಖೋತಾ ಆಗುವ ಸಾಧ್ಯತೆ ಇದೆ.

ADVERTISEMENT

ಮರಗಳಿಗೆ ರೋಗ ತಗುಲಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ಕಂಗಾಲಾಗಿದ್ದಾರೆ. ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಣ್ಣ ಬೆಳೆಗಾರರ ಬದುಕು ಅತಂತ್ರವಾಗಿದೆ. ಕೊಳೆ ರೋಗ ನಷ್ಟಕ್ಕೆ ಪರಿಹಾರ ಕೋರಿ ಇದುವರೆಗೆ 35 ಸಾವಿರ ಅರ್ಜಿಗಳುಸಲ್ಲಿಕೆಯಾಗಿವೆ. ಹಣ ಬಿಡುಗಡೆ ಮಾಡಲು ಈಗಾಗಲೇ ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ನಿಯಮದ ಪ್ರಕಾರ ಪ್ರತಿ ಹೆಕ್ಟೇರ್‌ ತೋಟಕ್ಕೆ ₹ 18 ಸಾವಿರ ನೀಡಲು ಅವಕಾಶವಿದೆ. ರಾಜ್ಯ ಸರ್ಕಾರ ಹೆಚ್ಚು
ವರಿ ₹ 10 ಸಾವಿರ ನೀಡುತ್ತಿದೆ. ಈಗಾಗಲೇ 35 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನಷ್ಟು ಅರ್ಜಿಗಳು
ಬರುತ್ತಿವೆ. ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರ ನೀಡುತ್ತಾರೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್.

ಬೋರ್ಡೊ ದ್ರಾವಣವೇ ಗತಿ
ಇದುವರೆಗೂ ಕೋಳೆರೋಗ ನಿವಾರಣೆಗೆ ಇರುವ ಪರಿಹಾರ ಬೋರ್ಡೊ ದ್ರಾವಣ. 100 ಲೀಟರ್ ನೀರಿಗೆ 1 ಕೆ.ಜಿ. ಮೈಲುತುತ್ತಾ, ಸುಣ್ಣ, ರಾಳ ಮಿಶ್ರಣ ಮಾಡಿ ಅಡಿಕೆ ಗೊನೆಗಳಿಗೆ ಸಿಂಪಡಣೆ ಮಾಡಲಾಗುತ್ತದೆ. ಒಂದು ಎಕರೆಗೆ ಈ ದ್ರಾವಣ ಸಿಂಪಡಣೆ ಮಾಡಲು ₹ 10 ಸಾವಿರ ಖರ್ಚು ಬರುತ್ತದೆ. ಸಿಂಪಡಣೆ ಮಾಡುವ ಕೂಲಿಗೆ ₹ 1 ಸಾವಿರ ನೀಡಲಾಗುತ್ತಿದೆ.

‘ಮಲೆನಾಡಿನ ರೈತರು ದುಡಿದ ಹಣವನ್ನೆಲ್ಲ ಕೊಳೆರೋಗ ನಿವಾರಣೆಗೆ ವಿನಿಯೋಗಿಸುತ್ತಿದ್ದಾರೆ.ಸರ್ಕಾರ ಕೊಡುವ ಹಣ ಬೋರ್ಡೊ ದ್ರಾವಣ ಸಿಂಪಡಣೆಗೂ ಸಾಲುತ್ತಿಲ್ಲ.ಫಸಲು ನಷ್ಟ, ಮರ ಕಳೆದುಕೊಂಡದ್ದಕ್ಕೆ ಪರಿಹಾರವೇ ಇಲ್ಲ. ಸರ್ಕಾರ ಮೊತ್ತ ಹೆಚ್ಚಿಸಬೇಕು’ ಎಂದು ಒತ್ತಾಯಿಸುತ್ತಾರೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.