ADVERTISEMENT

ಅಡಿಕೆ ಕ್ಯಾನ್ಸರ್‌ ಕಾರಕವೇ: ಶೀಘ್ರ ವರದಿಗೆ ಚೌಹಾಣ್‌ ನಿರ್ದೇಶನ

ಕೇಂದ್ರ ಸಚಿವರು ಹಾಗೂ ಸಂಸದರ ಜತೆಗೆ ಕೃಷಿ ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 16:17 IST
Last Updated 22 ಆಗಸ್ಟ್ 2025, 16:17 IST
ಕೇಂದ್ರ ಸಚಿವರ ಹಾಗೂ ಸಂಸದರ ನಿಯೋಗವು ಶಿವರಾಜ ಸಿಂಗ್‌ ಚೌಹಾಣ್‌ ಅವರಿಗೆ ಮನವಿ ಸಲ್ಲಿಸಿತು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಎಚ್‌.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಸಂಸದ ಗೋವಿಂದ ಕಾರಜೋಳ ಚಿತ್ರದಲ್ಲಿದ್ದಾರೆ. 
ಕೇಂದ್ರ ಸಚಿವರ ಹಾಗೂ ಸಂಸದರ ನಿಯೋಗವು ಶಿವರಾಜ ಸಿಂಗ್‌ ಚೌಹಾಣ್‌ ಅವರಿಗೆ ಮನವಿ ಸಲ್ಲಿಸಿತು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಎಚ್‌.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಸಂಸದ ಗೋವಿಂದ ಕಾರಜೋಳ ಚಿತ್ರದಲ್ಲಿದ್ದಾರೆ.    

ನವದೆಹಲಿ: ಅಡಿಕೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಶೀಘ್ರದಲ್ಲಿ ಸಂಶೋಧನೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಐಸಿಎಆರ್‌ಗೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ ಚೌಹಾಣ್‌ ನಿರ್ದೇಶನ ನೀಡಿದರು. 

ಕರ್ನಾಟಕದ ಸಂಸದರ ನಿಯೋಗ ಮತ್ತು ಕೇಂದ್ರ ಸಚಿವರ ಜತೆಗೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಅಡಿಕೆ ಬೆಳೆಗಾರರ ​​ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಶೀಘ್ರದಲ್ಲೇ ಬೆಂಗಳೂರಿಗೆ ಬರುವುದಾಗಿ ಭರವಸೆ ನೀಡಿದರು. 

ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ನಾನಾ ಕಾರಣಗಳಿಂದ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಈ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಬೆಳೆಗಾರರ ಸಮಸ್ಯೆಗಳನ್ನು ಕಾಲಾವಧಿಯಲ್ಲಿ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದರು. 

ADVERTISEMENT

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಶಿವರಾಜ ಸಿಂಗ್‌ ಚೌಹಾಣ್‌ ಗಮನ ಸೆಳೆಯಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು. 

‘ಅಡಿಕೆಗೆ ಎಲೆ ಚುಕ್ಕಿ ರೋಗ ಬಂದರೆ ಮತ್ತೆ ಅಲ್ಲಿ ಅಡಿಕೆ ಕೃಷಿ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಕಂಡುಹಿಡಿಯುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ’ ಎಂದರು. 

‘ಅಡಿಕೆ ಕೊಯಿಲಿಗೆ ಕಾರ್ಮಿಕರು ಸಿಗುತ್ತಿಲ್ಲ. ಫೈಬರ್‌ ದೋಟಿ ಬಳಸಿ ಅಡಿಕೆ ಕಟಾವು ಮಾಡಬಹುದು. ಆದರೆ, ಈ ದೋಟಿಗೆ ಶೇ 48 ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡುವಂತೆ ಕೋರಿದ್ದೇವೆ. ಅಡಿಕೆ ಹಾಳೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಸರ್ಕಾರವು ಜಾಗೃತಿ ಮೂಡಿಸಬೇಕು’ ಎಂದು ಅವರು ಒತ್ತಾಯಿಸಿದರು. 

ನಿಯೋಗದ ಬೇಡಿಕೆಗಳೇನು? 

  • ಅಡಿಕೆ ಹಳದಿ ಎಲೆ ಶಿಲೀಂಧ್ರ ಮತ್ತು ಇತರ ರೋಗಗಳಿಗೆ ದೀರ್ಘಾವಧಿಯ ಅಧ್ಯಯನ ಮಾಡಲು ಮತ್ತು ಪರಿಹಾರ ಕಂಡುಹಿಡಿಯಲು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಿಂದ ಸಮಗ್ರ ಅಧ್ಯಯನ ನಡೆಸಬೇಕು. 

  • ದೇಶಕ್ಕೆ ಅಡಿಕೆ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. 

  • ಅಡಿಕೆಯ ಅಕ್ರಮ ವ್ಯಾಪಾರ ತಡೆಗೆ ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಹಾಗೂ ಚೆಕ್‌ ಪಾಯಿಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. 

  • ಎಫ್‌ಎಸ್‌ಎಸ್ಎಐ ಪ್ರಕಾರ ಅಡಿಕೆಯಲ್ಲಿ ತೇವಾಂಶ ಪ್ರಮಾಣ ಶೇ 7ರಷ್ಟಿರಬೇಕು. ಈ ಮಟ್ಟ ಕಾಯ್ದುಕೊಳ್ಳುವುದು ತುಂಬಾ ಕಷ್ಟ. ಹವಾಮಾನ ಪರಿಸ್ಥಿತಿಗಳಿಂದಾಗಿ ಈ ಪ್ರಮಾಣ ಶೇ 12 ಇರಬಹುದು ಎಂದು ಆದೇಶ ಹೊರಡಿಸಬೇಕು. 

  • ಅಡಿಕೆ ಕೃಷಿಗೆ ನೀಡುವ ಸಾಲದ ಮೇಲಿನ ಬಡ್ಡಿ ಕಡಿತ ಮಾಡಬೇಕು. 

  • ಅಡಿಕೆ ಮೇಲಿನ ಜಿಎಸ್‌ಟಿಯನ್ನು ಶೇ 5ರಿಂದ ಶೇ 2ಕ್ಕೆ ಇಳಿಸಬೇಕು. 

  • ಅಡಿಕೆ ಬೆಳೆಗಾರರು ಬಳಸುವ ಕಾಪರ್‌ ಸಲ್ಫೇಟ್ ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಕಡಿಮೆ ಮಾಡಬೇಕು. 

  • ರೈತರು ಅಡಿಕೆ ಶೇಖರಣೆ ಮಾಡಲು ಗೋದಾಮುಗಳ ವ್ಯವಸ್ಥೆ ಮಾಡಬೇಕು. 

  • ರೈತರಿಗೆ ಬೆಳೆ ವಿಮಾ ಸೌಲಭ್ಯ ಸರಳೀಕರಣಗೊಳಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.