ADVERTISEMENT

ಬಿಡುಗಡೆಯಾಗದ ಹಣ: ‘ಅರಿವು’ ಯೋಜನೆಯಲ್ಲಿ ಸಾಲ ಸಿಗದೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಬಿಡುಗಡೆಯಾಗದ ಹಣ

ಸಚ್ಚಿದಾನಂದ ಕುರಗುಂದ
Published 17 ಫೆಬ್ರುವರಿ 2022, 20:45 IST
Last Updated 17 ಫೆಬ್ರುವರಿ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ನೀಡುವ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಗೆ ಗ್ರಹಣ ಹಿಡಿದಿದ್ದು, ವಿದ್ಯಾರ್ಥಿಗಳು ದಿಕ್ಕುತೋಚದ ಸ್ಥಿತಿಗೆ ತಲುಪಿದ್ದಾರೆ.

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ‘ಅರಿವು’ ಹೆಸರಿನಲ್ಲಿ ಶೈಕ್ಷಣಿಕ ಸಾಲ ಯೋಜನೆಯನ್ನು ಸರ್ಕಾರ ರೂಪಿಸಿದೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಲ್ಕೈದು ಕಂತುಗಳಲ್ಲಿ ಸಾಲ ನೀಡಲಾಗುತ್ತಿದೆ. ಕೋರ್ಸ್‌ಗಳ ಅವಧಿಯ ಮೇಲೆ ಈ ಕಂತುಗಳನ್ನು ನಿರ್ಧರಿಸಲಾಗುತ್ತದೆ. ‘ಸುವಿಧಾ’ ಸಾಫ್ಟ್‌ವೇರ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.

ಕಾಲೇಜಿಗೆ ದಾಖಲಾತಿಯಾಗಿರುವ ಬಗ್ಗೆ ಪ್ರವೇಶ ಪತ್ರ ಮತ್ತು ಅಂಕಪಟ್ಟಿಗಳನ್ನು ಪರಿಶೀಲಿಸಿದ ಬಳಿಕ ಸಾಲ ಮಂಜೂರಾತಿ ಮಾಡಲಾಗುತ್ತದೆ. ಪ್ರವೇಶ ಪತ್ರದ ಪ್ರತಿ ಪಡೆದ 15 ದಿನಗಳ ನಂತರ ಸಾಲ ಬಿಡುಗಡೆ ಮಾಡಲಾಗುತ್ತಿದೆ. ನಂತರ, ಸೆಮಿಸ್ಟರ್‌ಗಳ ಅನುಗುಣವಾಗಿ ಸಾಲವನ್ನು ಹಂತ ಹಂತವಾಗಿ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ADVERTISEMENT

ಆದರೆ, 2021–22ನೇ ಸಾಲಿಗೆ ಅರ್ಜಿ ಮತ್ತು ಇತರ ಎಲ್ಲ ದಾಖಲೆಗಳನ್ನು ಸಲ್ಲಿಸಿ ಮೂರು ತಿಂಗಳಾದರೂ ಇದುವರೆಗೆ ಸಾಲ ದೊರೆತಿಲ್ಲ. ಇದರಿಂದ, ಹಲವು ವೃತ್ತಿಪರ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಸತಾಯಿಸುತ್ತಿವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಒಟ್ಟು ಮೂರು ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ₹20 ಕೋಟಿ ಸಾಲ ಮಂಜೂರು ಮಾಡಬೇಕಾಗಿದೆ. ಇವರಲ್ಲಿ 8 ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬಡ್ಡಿ ರಹಿತ ಸಾಲ ನೀಡುವುದು ಸಹ ಸೇರಿದೆ. ಈ ವಿದ್ಯಾರ್ಥಿಗಳಿಗೆ ₹28 ಲಕ್ಷ ಮಂಜೂರು ಮಾಡಬೇಕಾಗಿದೆ.

‘ಸುವಿಧಾ ಪೋರ್ಟಲ್‌ನಲ್ಲಿ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಶುಲ್ಕ ಪಾವತಿಸಿದರೆ ಮಾತ್ರ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡುವುದಾಗಿ ಕಾಲೇಜುಗಳ ಆಡಳಿತ ಮಂಡಳಿ ತಿಳಿಸಿವೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ ಅಧ್ಯಯನಕ್ಕೆ ಹೆಚ್ಚು ಖರ್ಚು ಬರುತ್ತದೆ. ಜತೆಗೆ, ಪ್ರಾಜೆಕ್ಟ್‌ಗಳನ್ನೂ ತಯಾರಿಸಬೇಕು. ಅದಕ್ಕೂ ಖರ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಮಂಜೂರಾಗದ ಕಾರಣ ಕಷ್ಟವಾಗುತ್ತಿದೆ. ನಾವು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಕೆಲವರು ಖಾಸಗಿಯಾಗಿ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ದುಬಾರಿ ಬಡ್ಡಿಗೆ ಸಾಲ ಪಡೆದು ಕಾಲೇಜುಗಳಿಗೆ ಶುಲ್ಕ ಪಾವತಿಸುತ್ತಿದ್ದಾರೆ.

‘ನನ್ನ ಮಗ ಎಂಜಿನಿಯರಿಂಗ್‌ ನಾಲ್ಕನೇ ಸೆಮಿಸ್ಟರ್‌ ಓದುತ್ತಿದ್ದಾನೆ. ಶುಲ್ಕ ಪಾವತಿಸುವಂತೆ ಕಾಲೇಜಿನಿಂದ ಒತ್ತಡವಿತ್ತು. ಕೊನೆಗೆ ಖಾಸಗಿ ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದು ಶುಲ್ಕ ಪಾವತಿಸಬೇಕಾಯಿತು. ನನ್ನ ಮಗನಿಗೆ ನಾಲ್ಕನೇ ಕಂತಿನ ಸಾಲ ಮಂಜೂರಾಗಬೇಕಾಗಿದೆ. ನಾಲ್ಕು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೇವೆ. ಆದರೆ, ನಿಗಮದ ಕಚೇರಿಯಲ್ಲಿ ಕೇಳಿದರೆ ಅನುದಾನ ಮಂಜೂರಾಗಿಲ್ಲ ಎಂದು ಹೇಳುತ್ತಾರೆ. ಇದು ಕೇವಲ ನಮ್ಮ ಒಬ್ಬರ ಸಮಸ್ಯೆ ಅಲ್ಲ. ನೂರಾರು ವಿದ್ಯಾರ್ಥಿಗಳ ಸಮಸ್ಯೆಯಾಗಿದೆ’ ಎಂದು ವೆಂಕಟೇಶ್‌ ದೂರಿದರು.

‘ತಾಂತ್ರಿಕ ಸಮಸ್ಯೆಯಿಂದ ವಿಳಂಬ’

‘ಅರಿವು ಶೈಕ್ಷಣಿಕ ಸಾಲ ಮಂಜೂರು ಮಾಡಲು ಅನುದಾನದ ಕೊರತೆ ಇಲ್ಲ. ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ತ್ವರಿತಗತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಭಾಗ;ವಿದ್ಯಾರ್ಥಿಗಳು;ಸಾಲದ ಮೊತ್ತ(₹ಕೋಟಿಗಳಲ್ಲಿ)

ಬೆಂಗಳೂರು;902;5.95

ಮೈಸೂರು;841;5.55

ಬೆಳಗಾವಿ;837;5.50

ಕಲಬುರಗಿ;412;2.71

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.