ADVERTISEMENT

ಸೇನಾ ಶಕ್ತಿ ಪ್ರದರ್ಶನ: ಯೋಧರ ಸಾಹಸ ಆಕರ್ಷಕ ಪಥಸಂಚಲನ

ಶೌರ್ಯ ಪ್ರಶಸ್ತಿ, ಪದಕ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 23:44 IST
Last Updated 15 ಜನವರಿ 2023, 23:44 IST
ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು
ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು   

ಬೆಂಗಳೂರು: ಮೈನವಿರೇಳಿಸುವ ಯೋಧರ ಸಾಹಸ ಪ್ರದರ್ಶನ, ಆಕರ್ಷಕ ಪಥಸಂಚಲನ, ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ಹಾರಾಟ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ ಇಲ್ಲಿನ ’ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌‘ನಲ್ಲಿ(ಎಂಇಜಿ) ಸೇನಾ ದಿನವನ್ನು ಸಂಭ್ರಮದೊಂದಿಗೆ ಭಾನುವಾರ ಆಚರಿಸಲಾಯಿತು.

ಇದೇ ಪ್ರಥಮ ಬಾರಿ ನಗರದಲ್ಲಿ ನಡೆದ ಸೇನಾ ದಿನ ಕಾರ್ಯಕ್ರಮವು ಯೋಧರ ಸ್ಮರಣೆ ಮತ್ತು ವಿಶಿಷ್ಟ ಕಾರ್ಯಾಚರಣೆಗಳು ಹಾಗೂ ಸೇನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಯುದ್ಧ ಸ್ಮಾರಕದಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ, ಅಸಾಧಾರಣ ಸಾಹಸ ಪ್ರದರ್ಶನ ಮತ್ತು ಸೇವೆ ಸಲ್ಲಿಸಿದ ಯೋಧರಿಗೆ ಮತ್ತು ಘಟಕಗಳಿಗೆ ಶೌರ್ಯ ಪ್ರಶಸ್ತಿ, ಸೇನಾ ಪದಕ ಹಾಗೂ ಪ್ರಶಂಸಾ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು. ಲಾನ್ಸ್‌ ನಾಯಕ್‌ ಗೋಪಾಲ್‌ ಸಿಂಗ್‌ ಬಡೊರಿಯಾ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರಪ್ರದಾನ ಮಾಡಲಾಯಿತು. ಇವರ ತಂದೆ ಮುನಿಮ್‌ ಸಿಂಗ್‌ ಬಡೊರಿಯಾ ಅವರು ಸೇನಾ ಮುಖ್ಯಸ್ಥರಿಂದ ಪ್ರಶಸ್ತಿ ಸ್ವೀಕರಿಸಿದರು.

ADVERTISEMENT

ಕರ್ನಾಟಕ ಮತ್ತು ಕೇರಳ ಉಪವಲಯದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ರವಿ ಮುರುಗನ್‌ ನೇತೃತ್ವದಲ್ಲಿ ವಿವಿಧ ರೆಜಿಮೆಂಟ್‌ಗಳ ಯೋಧರಿಂದ ಆಕರ್ಷಕ ಪಥಸಂಚಲನ ನಡೆಯಿತು.

ರೆಜಿಮೆಂಟ್‌ ಆಫ್‌ ಆರ್ಟಿಲರಿ, ಮದ್ರಾಸ್‌ ರೆಜಿಮೆಂಟ್‌ ಸೆಂಟರ್‌, ಬಾಂಬೆ ಎಂಜಿನಿಯರಿಂಗ್‌ ಗ್ರೂಪ್‌ (ಬಾಂಬೆ ಸ್ಯಾಪರ್ಸ್‌), ಪ್ಯಾರಾಚೂಟ್‌ ರೆಜಿಮೆಂಟ್‌, ಮಹರ್‌ ರೆಜಿಮೆಂಟ್‌ ಯೋಧರು ಮತ್ತು ಆರ್ಮಿ ಸರ್ವಿಸ್‌ ಕೋರ್‌ನ ಅಶ್ವಾರೂಢ ಸವಾರರ ಪಥಸಂಚಲನವು ಮಿಲಿಟರಿ ಬ್ಯಾಂಡ್‌ಗಳೊಂದಿಗೆ ಆಕರ್ಷಕವಾಗಿ ನಡೆಯಿತು.

ಧ್ರುವ ಮತ್ತು ರುದ್ರ ಹೆಲಿಕಾಪ್ಟರ್‌ಗಳು ಹಾಗೂ ಸುಖೋಯಿ ಯುದ್ಧ ವಿಮಾನಗಳ ಹಾರಾಟ ಗಮನಸೆಳೆಯಿತು. ಇದೇ ಸಂದರ್ಭದಲ್ಲಿ, ರಾಷ್ಟ್ರ ಧ್ವಜ ಮತ್ತು ಸೇನಾ ಧ್ವಜ ಹೊಂದಿದ್ದ ಡ್ರೋನ್‌ಗಳ ಹಾರಾಟವೂ ಗಮನಸೆಳೆಯಿತು. 6ರಿಂದ 8 ಕೆ.ಜಿ. ತೂಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಈ ಡ್ರೋನ್‌ಗಳು ಹೊಂದಿವೆ. ಕೃಷಿಯಲ್ಲಿ ಬಳಸುವ ಡ್ರೋನ್‌ನಿಂದ ಪುಷ್ಪವೃಷ್ಟಿ ಮಾಡಲಾಯಿತು.

ಪ್ಯಾರಾಚೂಟ್ ರೆಜಿಮೆಂಟ್‌ ಯೋಧರು ಪ್ಯಾರಾಚೂಟ್‌ಗಳ ಮೂಲಕ ಗಗನದಿಂದ ಪರೇಡ್‌ ಮೈದಾನದಲ್ಲಿಳಿದು ಚಪ್ಪಾಳೆಗಿಟ್ಟಿಸಿದರು.

ಆರ್ಮಿ ಸರ್ವಿಸ್‌ ಕೋರ್‌ ಕ್ಯಾಪ್ಟನ್‌ ಅಭಿಜಿತ್‌ ಸಿಂಗ್‌ ನೇತೃತ್ವದಲ್ಲಿ ’ಟೊರ್ನಾಡೊ‘ ತಂಡದ ವಿವಿಧ ಕಸರತ್ತುಗಳು ಪ್ರೇಕ್ಷಕರ ಮೈಜುಮ್ಮೆನಿಸಿದವು. ಏಳು ಬುಲೆಟ್‌ಗಳಲ್ಲಿ 27 ಯೋಧರು, ವ್ಹೀಲಿ ಪ್ರದರ್ಶನ ಸೇರಿದಂತೆ ಹತ್ತಾರು ಸಾಹಸಗಳು ಗಮನಸೆಳೆದವು.

ಸೇನಾ ದಿನದ ಮಹತ್ವ
ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ರಾಯ್‌ ಬಚರ್ ಅವರಿಂದ ಭಾರತೀಯ ಸೇನೆಯ ‘ಕಮಾಂಡರ್ ಇನ್ ಚೀಫ್’ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.